ವಾಷಿಂಗ್ಟನ್: ಈಗಾಗಲೇ ಹಲವಾರು ಆತಂಕಗಳನ್ನು ಎದುರಿಸುತ್ತಿರುವ ಟ್ರಂಪ್ ಆಡಳಿತ ಭಾರತ- ರಷ್ಯಾದ ಎಸ್- 400 ಕ್ಷಿಪಣಿ ಒಪ್ಪಂದದಿಂದ ಬೆದರಿದೆ. ಈ ಒಪ್ಪಂದದಿಂದ ಹಿಂದೆ ಸರಿಯುವಂತೆ ಭಾರತದ ಮೇಲೆ ಒತ್ತಡ ಹೇರುತ್ತಿದೆ.ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನ ಖರೀದಿಸದಂತೆ ಒತ್ತಡ ಹೇರಲು ಆರಂಭಿಸಿದೆ.
ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸದಂತೆ ಅಮೆರಿಕ ನೀಡಿದ ಎಚ್ಚರಿಕೆ ನಡುವೆಯೇ ಮೋದಿ-ಪುಟಿನ್ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದವು ಭಾರತದ ವಾಯು ಪಡೆಯ ಸಾಮರ್ಥ್ಯದ ವೃದ್ಧಿಗೆ ನೆರವಾಗುತ್ತದೆ. ಆದರೆ, ಮತ್ತೆ ಭಾರತದ ಮನವೊಲಿಕೆಗೆ ಮುಂದಾಗಿರುವ ಅಮೆರಿಕ ಭಾರತ ಎಸ್ - 400 ಕ್ಷಿಪಣಿ ವ್ಯವಸ್ಥೆ ಖರೀದಿಸುವ ನಿರ್ಧಾರವನ್ನು ಕೈಬಿಟ್ಟರೆ ವಾಷಿಂಗ್ಟನ್, ತನ್ನ ಉನ್ನತ ಶ್ರೇಣಿಯ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (ಥಾಡ್) ಮತ್ತು ಪೇಟ್ರಿಯಾಟ್-3 ಕ್ಷಿಪಣಿಗಳ ರಕ್ಷಣಾ ವ್ಯವಸ್ಥೆಗಳನ್ನು ಭಾರತಕ್ಕೆ ಮಾರಾಟ ಮಾಡಲು ಸಿದ್ಧವಾಗಿದೆ ಎಂದು ತಿಳಿಸಿದೆ. ಆದರೆ, ರಷ್ಯಾ ರಕ್ಷಣಾ ಕ್ಷೇತ್ರಕ್ಕೆ ಹಣದ ಹರಿವನ್ನು ತಡೆಗಟ್ಟುವುದೇ ಅಮೆರಿಕದ ಉದ್ದೇಶವಾಗಿದೆ.
ಏಷ್ಯಾ ಫೆಸಿಪಿಕ್ನಲ್ಲಿ ಚೀನಾ ಪ್ರಾಬಲ್ಯವನ್ನ ತಡೆಗಟ್ಟಲು ಅಮೆರಿಕಕ್ಕೆ ಭಾರತದ ನೆರವು ಬೇಕು. ಏಷ್ಯಾ ಫೆಸಿಫಿಕ್ ಮಹಾಸಾಗರದಲ್ಲಿ ಅಮೆರಿಕ - ಭಾರತ ಹಾಗೂ ಜಪಾನ್ ಪರಸ್ಪರ ಸಹಕಾರಕ್ಕೆ ಮುಂದಾಗಿವೆ. ಈ ಮೂಲಕ ಚೀನಾವನ್ನ ಕಟ್ಟಿ ಹಾಕಲು ಮೂರೂ ರಾಷ್ಟ್ರಗಳು ಮುಂದಾಗಿವೆ. ಒಂದ್ಕಡೆ ಇಂಡಿಯಾ ಸಹಕಾರ ಬೇಕು. ಆದರೆ ರಷ್ಯಾದೊಂದಿಗೆ ಎಸ್- 400 ಒಪ್ಪಂದ ಬೇಡ ಎಂಬುದು ಅಮೆರಿಕದ ನೀತಿ.