ವಾಷಿಂಗ್ಟನ್:ಅಫ್ಘಾನಿಸ್ತಾನದಿಂದ ತನ್ನ ಸೇನೆ ಹಿಂದೆ ಕರೆಸಿಕೊಂಡಿರುವ ಅಮೆರಿಕ ಇದೀಗ ಮತ್ತೊಂದು ರಾಷ್ಟ್ರದಿಂದಲೂ ತನ್ನ ಸೇನಾ ಕಾರ್ಯಾಚರಣೆ ಅಂತ್ಯಗೊಳಿಸುವ ಸೂಚನೆ ನೀಡಿದೆ. ಇರಾಕ್ನಲ್ಲಿ ಸೇನಾ ಕಾರ್ಯಚರಣೆ ನಡೆಸುತ್ತಿರುವ ಅಮೆರಿಕ ಸೇನೆಯನ್ನ ಡಿಸೆಂಬರ್ ಅಂತ್ಯದ ಒಳಗೆ ವಾಪಸ್ ಕರೆಸಿಕೊಳ್ಳುವ ಮಾಹಿತಿ ಹೊರಬಿದ್ದಿದೆ.
ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಇರಾಕ್ ಹಾಗೂ ಅಮೆರಿಕ ಸರ್ಕಾರಗಳು, ಇರಾಕ್ನಲ್ಲಿ ಡಿಸೆಂಬರ್ 31ರ ನಂತರ ಯಾವುದೇ ಯುದ್ಧದಲ್ಲಿ ಅಮೆರಿಕ ಸೇನೆ ಇರುವುದಿಲ್ಲ ಎಂದು ತಿಳಿಸಿದೆ.
ಇರಾನ್ನ ದೇಶಾಂಗ ವ್ಯವಹಾರಗಳ ಸಚಿವ ಡಾ.ಫುವಾಡ್ ಹುಸೇನ್ ಮತ್ತು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಜೆ ಬ್ಲಿಂಕೆನ್ ಜಂಟಿ ಹೇಳಿಕೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಇರಾಕ್ - ಅಮೆರಿಕ ಸ್ನೇಹ ಮತ್ತು ಸಹಕಾರದ ಸಂಬಂಧಕ್ಕಾಗಿ 2008ರ ಕಾರ್ಯತಂತ್ರದ ಚೌಕಟ್ಟಿನ ಒಪ್ಪಂದಕ್ಕೆ ಅನುಸಾರವಾಗಿ, ಜೂನ್ 11, 2020ರಂದು ಪ್ರಾರಂಭವಾದ ಕಾರ್ಯತಂತ್ರದ ಅಂತಿಮ ಮಾತುಕತೆ ಇದಾಗಿರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಮಾತುಕತೆಯಲ್ಲಿ ಕುರ್ದಿಸ್ತಾನ್ ಅಧಿಕಾರಿ ಸಹ ಭಾಗಿಯಾಗಿದ್ದರು. ಉಭಯ ದೇಶಗಳ ಮಾತುಕತೆಯಲ್ಲಿ ಎರಡೂ ದೇಶಗಳ ದೀರ್ಘಕಾಲಿನ ಸಂಬಂಧ ಬಲಪಡಿಸಲು ಒತ್ತು ನೀಡಲಾಗಿದೆ. ಪ್ರಾದೇಶಿಕ ಸ್ಥಿರತೆ, ಸಾರ್ವಜನಿಕ ಆರೋಗ್ಯ, ಹವಾಮಾನ ಬದಲಾವಣೆ, ಇಂಧನ ದಕ್ಷತೆ, ಮಾನವೀಯ ನೆರವು, ಮಾನವ ಹಕ್ಕುಗಳು, ಆರ್ಥಿಕ ಸಹಕಾರ, ಮತ್ತು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯಗಳು ಇತರ ವಿಷಯಗಳ ಕುರಿತ ಸಹಕಾರ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.
ಇರಾಕ್ನ ಸಾರ್ವಭೌಮತ್ವ ಮತ್ತು ಕಾನೂನುಗಳಿಗೆ ಗೌರವ ನೀಡುವ ಹಾಗೂ ಇರಾಕ್ ತನ್ನ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸುವುದಾಗಿ ಅಮೆರಿಕ ತಿಳಿಸಿದೆ.