ವಾಷಿಂಗ್ಟನ್: ರಷ್ಯಾ- ಉಕ್ರೇನ್ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಮತ್ತಷ್ಟು ಗಾಢವಾದ ತಿರುವು ಪಡೆದುಕೊಳ್ಳಲಿದೆ ಎಂಬ ಆತಂಕ ಹರಡಿರುವ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಚೀನಾ ಸೋಮವಾರ ರೋಮ್‌ಗೆ ಉನ್ನತ ಮಟ್ಟದ ನಿಯೋಗವನ್ನು ಕಳುಹಿಸುತ್ತಿವೆ.
ರೋಮ್‌ನಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಉಭಯ ರಾಷ್ಟ್ರಗಳ ಯುದ್ಧದ ಕುರಿತು ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ರಷ್ಯಾದ ಆರ್ಥಿಕತೆ ಮೇಲೆ ಮತ್ತಷ್ಟು ಹೊಡೆತ ನೀಡಲು ಹಾಗೂ ರಷ್ಯಾವನ್ನು ಅರ್ಥಿಕವಾಗಿ ಕುಗ್ಗಿಸುವಂತೆ ಮಾಡಲು ಚೀನಾದ ನೆರವು ಕೇಳಿದ್ದಾರೆ. ರಷ್ಯಾಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಚೀನಾ ಸಹಾಯ ಮಾಡಬಾರದು ಎಂದು ನೇರವಾಗಿ ಇದೇ ವೇಳೆ ಅಮೆರಿಕ ಎಚ್ಚರಿಕೆಯನ್ನೂ ನೀಡಿದೆ.
ಉಕ್ರೇನ್‌ನಲ್ಲಿ ವ್ಲಾಡಿಮಿರ್ ಪುಟಿನ್ ಅವರ ಪಡೆಗಳು ನಡೆಸಿದ ರಾಸಾಯನಿಕ ಅಥವಾ ಜೈವಿಕ ಶಸ್ತ್ರಾಸ್ತ್ರಗಳ ದಾಳಿ ಕುರಿತು ರಷ್ಯಾದ ನೀಡುತ್ತಿರುವ ತಪ್ಪು ಮಾಹಿತಿಯನ್ನ ಚೀನಾ ಹರಡುತ್ತಿದೆ ಎಂದು ಯುಎಸ್ ಅಧಿಕಾರಿಗಳು ಆರೋಪಿಸುತ್ತಿದ್ದಾರೆ.
ಇನ್ನು ಉಕ್ರೇನ್ ವಿರುದ್ಧ ಜಿದ್ದಿಗೆ ಬಿದ್ದಿರುವ ರಷ್ಯಾ ವಿರುದ್ಧ ಜಗತ್ತಿನಾದ್ಯಂತ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಈಗ ಅಮೆರಿಕ, ಯುರೋಪಿಯನ್ ಯೂನಿಯನ್ , ಬ್ರಿಟನ್, ಕೆನಡಾ ಮತ್ತು ಜಪಾನ್ ಉಕ್ರೇನ್ ಆಕ್ರಮಣದ ಬಗ್ಗೆ ರಷ್ಯಾದ "ಅತ್ಯಂತ ನೆಚ್ಚಿನ ರಾಷ್ಟ್ರ" ಸ್ಟೇಟಸ್ ಅನ್ನು ಹಿಂತೆಗೆದುಕೊಳ್ಳಲು ಜಂಟಿಯಾಗಿ ಕ್ರಮ ಕೈಗೊಂಡಿವೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಈಗಾಗಲೇ ಅಮೆರಿಕ ರಷ್ಯಾವನ್ನು ಆಪ್ತ ರಾಷ್ಟ್ರದಿಂದ ಕೈ ಬಿಡುವ ನಿರ್ಧಾರಕ್ಕೆ ಬಂದಿದೆ.
ಅತ್ಯಂತ ಒಲವು ಹೊಂದಿರುವ ರಾಷ್ಟ್ರ' ಸ್ಟೇಟಸ್ ಎಂದರೇನು?:ವಿಶ್ವ ವ್ಯಾಪಾರ ಸಂಸ್ಥೆಯ 164 ರಾಷ್ಟ್ರಗಳ ಸದಸ್ಯರು ಇತರ ರಾಷ್ಟ್ರಗಳ ಸದಸ್ಯರನ್ನು ಸಮಾನವಾಗಿ ಪರಿಗಣಿಸಲು ಬದ್ಧರಾಗಿರುವುದೇ ಆಗಿದೆ. ಆದ್ದರಿಂದ ಅವರು ಪರಸ್ಪರರ ಕಡಿಮೆ ಸುಂಕಗಳು, ಹೆಚ್ಚಿನ ಆಮದು ಕೋಟಾಗಳು ಮತ್ತು ಸರಕು ಹಾಗೂ ಸೇವೆಗಳಿಗೆ ಕಡಿಮೆ ವ್ಯಾಪಾರದ ಅಡೆತಡೆಗಳಿಂದ ಲಾಭ ಪಡೆಯುವ ಒಂದು ಅಂತಾರಾಷ್ಟ್ರೀಯ ಒಪ್ಪಂದವಾಗಿದೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಸಮುದ್ರದ ಆಳದಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಇಲ್ಲ ಎಂದ ಸರ್ಕಾರ