ವಾಷಿಂಗ್ಟನ್: ಚುನಾಯಿತ ಅಧ್ಯಕ್ಷ ಜೋ ಬೈಡನ್ ಪ್ರಮಾಣ ವಚನದ ಕಾರ್ಯಕ್ರಮದ ಮುನ್ನವೇ ಯುಎಸ್ ಕ್ಯಾಪಿಟಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಮಿಲಿಟರಿ ವಲಯವನ್ನಾಗಿ ಮಾಡಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಅಮೆರಿಕ ಕ್ಯಾಪಿಟಲ್‌ಗೆ ದಾಳಿ ನಡೆಸಿದ್ದ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದ್ದರು. ಇದಕ್ಕೆ ಸಮಾನವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡುವ ಭೀತಿ ಇರುವ ಹಿನ್ನೆಲೆ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ.
ಕ್ಯಾಪಿಟಲ್ನ ಕಚೇರಿ ಕಟ್ಟಡಗಳು ಮತ್ತು ಸುಪ್ರೀಂಕೋರ್ಟ್‌ನ ಸುತ್ತ ಏಳು ಅಡಿಗಳ ಅಡೆತಡೆಗಳನ್ನು ನಿರ್ಮಿಸಲಾಗಿದೆ. 25 ಸಾವಿರ ರಾಷ್ಟ್ರೀಯ ಗಾರ್ಡ್ ಪಡೆಗಳನ್ನು ನಿಯೋಜಿಸಲಾಗಿದ್ದು, ಅವರಲ್ಲಿ ಅನೇಕರು ಶಸ್ತ್ರಸಜ್ಜಿತರಾಗಿದ್ದಾರೆ. ಈ ಹಿಂದೆ ಆಗಿನ ಅಧ್ಯಕ್ಷ ಲಿಂಕನ್ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಇಷ್ಟೊಂದು ಭದ್ರತೆ ನೀಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಯಾವ ನೂತನ ಅಧ್ಯಕ್ಷರಿಗೂ ಪ್ರಮಾಣ ವಚಣ ಸ್ವೀಕರಿಸುವ ಸಂದರ್ಭ ಭದ್ರತೆ ನೀಡಿರಲಿಲ್ಲ. ಈಗ ಮತ್ತೆ ಅಂತರ್ ಯುದ್ಧದಿಂದಾಗಿ ಜೋ ಬೈಡನ್ ಕಾರ್ಯಕ್ರಮಕ್ಕೆ ಭದ್ರತೆ ನೀಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಮಾಣವಚನ ಸ್ವೀಕರಿಸುವ ಮೊದಲ ದಿನದಲ್ಲೇ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ, ಅಮೆರಿಕದ ಆರ್ಥಿಕತೆ, ಹವಾಮಾನ ಬದಲಾವಣೆ ಮತ್ತು ಜನಾಂಗೀಯ ನಿಂದನೆಗಳು ಸೇರಿದಂತೆ ಹಲವು ಎಕ್ಸಿಕ್ಯೂಟಿವ್ ಆದೇಶಗಳಿಗೆ ಜೋ ಬೈಡನ್ ಸಹಿ ಮಾಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
9/11 ಘಟನೆಯ ನಂತರ ಅಮೆರಿಕದಲ್ಲಿ ಯಾವುದೇ ಅಹಿತಕರ ಘಟನೆಗಳು ಕಂಡು ಬಂದಿಲ್ಲವೆಂದು ವರ್ಜೀನಿಯಾ ವಿಶ್ವವಿದ್ಯಾಲಯದ ಮಿಲ್ಲರ್ ಕೇಂದ್ರದ ಅಧ್ಯಕ್ಷೀಯ ಅಧ್ಯಯನ ನಿರ್ದೇಶಕರಾದ ಬಾರ್ಬರಾ ಪೆರ್ರಿ ಹೇಳಿದರು.