ವಾಷಿಂಗ್ಟನ್ :ಬೀಜಿಂಗ್ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಯುಎಸ್ ರಾಜತಾಂತ್ರಿಕವಾಗಿ ಬಹಿಷ್ಕಾರ ಘೋಷಿಸಿದೆ. ಆ ಮೂಲಕ ಒಲಿಂಪಿಕ್ಸ್ನಲ್ಲಿ ಅಮೆರಿಕ ಸರ್ಕಾರದ ಯಾವುದೇ ಅಧಿಕಾರಿಗಳೂ ಪಾಲ್ಗೊಳ್ಳುವುದಿಲ್ಲ ಎಂದು ಅಮೆರಿಕ ಸರ್ಕಾರ ತಿಳಿಸಿದೆ.
ಬೀಜಿಂಗ್ ಒಲಿಂಪಿಕ್ಸ್ ಬಹಿಷ್ಕಾರವನ್ನು ಅಮೆರಿಕ ಇದೀಗ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಆರು ತಿಂಗಳ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ.
ಡೆಮಾಕ್ರಟಿಕ್ ಪಕ್ಷದ ಸದಸ್ಯ ಮತ್ತು ಅಮೆರಿಕದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮೇ ತಿಂಗಳಿನಲ್ಲೇ ಮುಂಬರುವ ಬೀಜಿಂಗ್ ಒಲಿಂಪಿಕ್ಸ್‌ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕಬೇಕೆಂದು ಹೇಳಿದ್ದರು.
ಚೀನಾ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಕೇವಲ ಅಮೆರಿಕ ಮಾತ್ರವಲ್ಲ, ಜಗತ್ತಿನ ಯಾವುದೇ ನಾಯಕರು ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಭಾಗಿಯಾಗಬಾರದು ಎಂದು ನ್ಯಾನ್ಸಿ ಮನವಿ ಮಾಡಿದ್ದರು.
ಚೀನಾದ ಕ್ಸಿನ್ಜಿಯಾಂಗ್ನಲ್ಲಿ ಉಯಿಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ಕ್ರೈಂಗಳನ್ನು ತಡೆಯಲು ಚೀನಾ ಸರ್ಕಾರ ವಿಫಲವಾಗಿದೆ. ಅಲ್ಲಿ ಮುಸ್ಲಿಮರ ಮೇಲೆ ನರಮೇಧ ನಡೆಯುತ್ತಿರುವುದರ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ.
ಆದ್ರೂ ಸಹಿತ ಚೀನಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ, ಬೀಜಿಂಗ್ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕುತ್ತೇವೆ ಎಂದು ಜೋ ಬೈಡನ್ ಸರ್ಕಾರ ತಿಳಿಸಿದೆ.
ಬೀಜಿಂಗ್ನ ಒಲಿಂಪಿಕ್ಸ್ನಲ್ಲಿ ಅಮೆರಿಕ ಸರ್ಕಾರದ ಯಾವುದೇ ನಾಯಕರು, ಅಧಿಕಾರಿಗಳು ಭಾಗಿಯಾಗುವುದಿಲ್ಲ. ಆದರೆ, ಅಮೆರಿಕದ ಆಟಗಾರರು ಪಾಲ್ಗೊಳ್ಳಬಹುದು. ಬೀಜಿಂಗ್ ಬಳಿಕ 2028ರಲ್ಲಿ ಅಮೆರಿಕದ ಲಾಸ್ ಏಂಜಲಿಸ್ನಲ್ಲಿ ಒಲಿಂಪಿಕ್ಸ್ ಆಯೋಜಿಸಲಾಗಿದೆ. ಈ ಬಗ್ಗೆ ಚೀನಾ ಪ್ರತಿಕ್ರಿಯೆ ಹೇಗಿರಲಿದೆ ಎಂಬುದು ಕಾದುನೋಡ್ಬೇಕಾಗಿದೆ.