ವಿಶ್ವಸಂಸ್ಥೆ:ಸೋಮವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಕ್ರಮಗಳಿಗೆ ಸಂಬಂಧಪಟ್ಟಂತೆ ಯುಎಸ್ ಮತ್ತು ಚೀನಾ ನಡುವೆ ಗಲಾಟೆ ನಡೆಯಿತು.
ಕಡಲ ಭದ್ರತೆಯ ಕುರಿತು ನಡೆದ ಯುಎನ್ ಭದ್ರತಾ ಮಂಡಳಿಯ ಉನ್ನತ ಮಟ್ಟದ ಸಭೆಯಲ್ಲಿಪರ್ಷಿಯನ್ ಕೊಲ್ಲಿಯಲ್ಲಿ ಹಡಗುಗಳ ಮೇಲೆ ದಾಳಿ, ಗಿನಿ ಕೊಲ್ಲಿ, ಮೆಡಿಟರೇನಿಯನ್ ಹಾಗೂ ಅಟ್ಲಾಂಟಿಕ್ ಸಾಗರದಲ್ಲಿ ಔಷಧ ಮತ್ತು ಮಾನವ ಕಳ್ಳಸಾಗಣೆಯ ಬಗ್ಗೆ ಗಮನ ಸೆಳೆಯಲಾಯಿತು.
ಈ ತಿಂಗಳ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ರಾಷ್ಟ್ರಗಳು ಮತ್ತು ಜನರ ಸಾಮಾನ್ಯ ಪರಂಪರೆಯಾಗಿರುವ ವಿಶ್ವದ ಸಾಗರಗಳು ಮತ್ತು ಸಮುದ್ರಗಳು ವಿವಿಧ ಅಪಾಯಗಳನ್ನು ಎದುರಿಸುತ್ತಿವೆ ಎಂದು ಎಚ್ಚರಿಸಿದರು.
ಕಡಲ್ಗಳ್ಳತನ ಮತ್ತು ಭಯೋತ್ಪಾದನೆ, ಕೆಲವು ದೇಶಗಳು ವ್ಯಾಪಾರ ತಡೆಗಳನ್ನು ನಿರ್ಮಿಸುವುದು ಮತ್ತು ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ವಿಕೋಪ ಸವಾಲುಗಳ ಬಗ್ಗೆ ಅವರು ಮಾತನಾಡಿದರು.
ಇದನ್ನೂಓದಿ: ಸ್ನೇಹ ಒಪ್ಪಂದದ 50 ವರ್ಷಗಳ ಬಳಿಕವೂ ಗಟ್ಟಿಯಾಗಿ ಉಳಿದಿದೆ ಭಾರತ - ರಷ್ಯಾ ಬಾಂಧವ್ಯ
ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಸಭೆ ಉದ್ದೇಶಿಸಿ ಮಾತನಾಡುತ್ತಾ, ಐದು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ನ್ಯಾಯಪೀಠವು ಹಕ್ಕುಗಳನ್ನು ತಿರಸ್ಕರಿಸಿದರೂ, ಚೀನಾ ಪದೇ ಪದೇ ದಕ್ಷಿಣ ಸಮುದ್ರದಲ್ಲಿ ಪಾರುಪತ್ಯ ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾದ ಭದ್ರತೆ ಮತ್ತು ವಾಣಿಜ್ಯ ಸಂಘರ್ಷಗಳು ಉಂಟಾಗಬಹುದು ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಚೀನಾದ ಉಪ ರಾಯಭಾರಿ ಡಾಯ್ ಬಿಂಗ್, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಯುಎಸ್ ಅತಿದೊಡ್ಡ ಬೆದರಿಕೆಯಾಗಿದೆ. ಇಲ್ಲಿ ಅವರು ವಾದಿಸುತ್ತಿರುವುದು ಸಂಪೂರ್ಣ ರಾಜಕೀಯಪ್ರೇರಿತ ಎಂದು ಟೀಕಿಸಿದರು. ಇದರಿಂದ ದಕ್ಷಿಣ ಚೀನಾದ ಸಮುದ್ರದ ಹಕ್ಕಿಗಾಗಿ ಚೀನಾ ಮತ್ತು ಯುಎಸ್ ನಡುವೆ ಭದ್ರತಾ ಮಂಡಳಿ ಸಭೆಯಲ್ಲಿ ವಾಕ್ಸಮರ ನಡೆಯಿತು.
ಏನಿದು ವಿವಾದ ?
ಫೆಸಿಫಿಕ್ ಸಾಗರದ ಭಾಗವಾಗಿರುವ ದಕ್ಷಿಣ ಚೀನಾ ಸಮುದ್ರದ ಬಹುತೇಕ ಭಾಗ ನಮ್ಮದು ಎಂದು ಚೀನಾ ಪ್ರತಿಪಾದಿಸುತ್ತಲೇ ಬಂದಿದೆ. ಆದರೆ, ಇದನ್ನು ಒಪ್ಪಲು ನೆರೆಯ ರಾಷ್ಟ್ರಗಳು ಸಿದ್ದವಿಲ್ಲ. ವಿಶೇಷವಾಗಿ ಚೀನಾದ ಶತ್ರು ಅಮೆರಿಕ ಈ ಪ್ರದೇಶದಲ್ಲಿ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿವೆ. ಈ ಪ್ರದೇಶ ಅನಿಲ, ತೈಲ ಮತ್ತು ಇತರ ಸಮುದ್ರ ಸಂಪತ್ತುಗಳಿಂದ ಕೂಡಿರುವುದೇ ಎಲ್ಲಾ ರಾಷ್ಟ್ರಗಳ ಕಣ್ಣು ಬೀಳಲು ಕಾರಣ.
ಅಮೆರಿಕ ಮಾತ್ರವಲ್ಲದೆ, ವಿಯೆಟ್ನಾಂ, ಫಿಲಪ್ಪೀನ್ಸ್, ಬ್ರೂನಿ, ಮಲೇಶ್ಯಾ ಮತ್ತು ತೈವಾನ್ ಕೂಡ ದಕ್ಷಿಣ ಚೀನಾ ಸಮುದ್ರದಲ್ಲಿ ಪಾರುಪತ್ಯ ಸ್ಥಾಪಿಸಲು ಪ್ರಯತ್ತಿಸುತ್ತಿವೆ. ಹೀಗಾಗಿ, ಈ ರಾಷ್ಷ್ರಗಳ ನಡುವೆ ಸದಾ ಸಂಘರ್ಷ ನಡೆಯುತ್ತಲೇ ಇರುತ್ತವೆ. ಈ ವಿಚಾರದಲ್ಲಿ ವಿಶ್ವಸಂಸ್ಥೆ ಹಲವು ಬಾರಿ ಮಧ್ಯ ಪ್ರವೇಶಿಸಿದರೂ, ವಿವಾದ ಶಮನಗೊಂಡಿಲ್ಲ.
ಭಾರತದ ನಿಲುವೇನು?
ದಕ್ಷಿಣ ಚೀನಾ ಸಮುದ್ರ ವಿವಾದದಲ್ಲಿ ಭಾರತ ಒಂದು ರೀತಿ ತಟಸ್ಥ ನಿಲುವು ಅನುಸರಿಸುತ್ತಿದ್ದರೂ, ಅಮೆರಿಕದ ಪರವಾಗಿದೆ ಎಂದೇ ಹೇಳಬಹುದು. ಯಾಕೆಂದರೆ ಗಡಿ ಮತ್ತು ಇತರ ವಿಚಾರಗಳಿಗೆ ಸಂಬಂಧಪಟ್ಟಂತೆ ಚೀನಾ ಭಾರತ ಸಾಂಪ್ರಾದಾಯಿಕ ಶತ್ರು ರಾಷ್ಟ್ರವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಗಾಲ್ವಾನ್ ಗಡಿಯಲ್ಲಿ ಚೀನಾ ಕಾಲು ಕೆರೆದು ಜಗಳಕ್ಕೆ ಬಂದಾಗ, ದಕ್ಷಿಣ ಚೀನಾ ಸಮುದ್ರಕ್ಕೆ ನಾಲ್ಕು ಯುದ್ದ ನೌಕೆ ಕಳುಹಿಸಿ ಭಾರತ ಟಾಂಗ್ ನೀಡಿತ್ತು. ಅಲ್ಲದೆ ಯುಎಸ್ ಜೊತೆಗೂಡಿ ಭಾರತದ ನೌಕಾದಳ ಹಲವು ಬಾರಿ ಜಂಟಿ ಸಮರಭ್ಯಾಸ ನಡೆಸಿದೆ.