ಕರ್ನಾಟಕ

karnataka

ETV Bharat / international

'ಭಯೋತ್ಪಾದನೆ' ಕುರಿತ ಹೇಳಿಕೆಯಿಂದ ತಾಲಿಬಾನ್ ಉಲ್ಲೇಖ ಕೈಬಿಟ್ಟ ವಿಶ್ವಸಂಸ್ಥೆ ಭದ್ರತಾ ಮಂಡಳಿ! - ಅಫ್ಘಾನಿಸ್ತಾನ

ಜಾಗತಿಕ ಉಗ್ರರ ಪಟ್ಟಿಯಿಂದ 'ತಾಲಿಬಾನ್​' ಹೆಸರು ತೆಗೆಯಲು ವಿಶ್ವಸಂಸ್ಥೆ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎನ್ನುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇದೀಗ ಭಯೋತ್ಪಾದನೆ ಕುರಿತ ಹೇಳಿಕೆಯಿಂದ ತಾಲಿಬಾನ್ ಉಲ್ಲೇಖವನ್ನು ಕೈಬಿಟ್ಟಿದೆ.

UNSC drops Taliban reference from statement on 'terror'
'ಭಯೋತ್ಪಾದನೆ' ಕುರಿತ ಹೇಳಿಕೆಯಿಂದ ತಾಲಿಬಾನ್ ಉಲ್ಲೇಖವನ್ನು ಕೈಬಿಟ್ಟ UNSC

By

Published : Aug 29, 2021, 1:45 PM IST

ನ್ಯೂಯಾರ್ಕ್​: ಅಫ್ಘನ್​ ಗುಂಪುಗಳಿಗೆ ಬೇರೆ ಯಾವುದೇ ದೇಶದ ಭೂಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರನ್ನು ಬೆಂಬಲಿಸದಂತೆ ಕರೆ ನೀಡಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಇದೀಗ ತನ್ನ ಹೇಳಿಕೆಯಿಂದ ತಾಲಿಬಾನ್ ಉಲ್ಲೇಖವನ್ನು ಕೈಬಿಟ್ಟಿದೆ.

ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದ ಭಾರತದ ಖಾಯಂ ಪ್ರತಿನಿಧಿ, ಟಿ.ಎಸ್.ತಿರುಮೂರ್ತಿ ಅವರು ಆಗಸ್ಟ್ 16 ರಂದು ಅಂದರೆ, ಕಾಬೂಲ್​ ಜೊತೆ ಪೂರ್ತಿ ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ಒಂದು ದಿನದ ನಂತರ ತಮ್ಮ ಸಹಿಯಿರುವ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು. "ಅಫ್ಘಾನಿಸ್ತಾನದ ಪ್ರದೇಶವನ್ನು ಯಾವುದೇ ದೇಶಕ್ಕೆ ಬೆದರಿಕೆ ಹಾಕಲು ಅಥವಾ ಆಕ್ರಮಣ ಮಾಡಲು ಬಳಸಬಾರದು. ತಾಲಿಬಾನ್ ಅಥವಾ ಯಾವುದೇ ಇತರ ಅಫ್ಘನ್ ಗುಂಪುಗಳು ಅಥವಾ ವ್ಯಕ್ತಿಗಳು ಬೇರೆ ಯಾವುದೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರನ್ನು ಬೆಂಬಲಿಸಬಾರದು" ಎಂಬುದು ಈ ಹೇಳಿಕೆಯಾಗಿದೆ.

ಇದನ್ನೂ ಓದಿ: ಪಾಕ್‌ ಮೂಲದ ಉಗ್ರ ಸಂಘಟನೆಗಳಿಂದ ಜಾಗತಿಕ ಭದ್ರತೆಗೆ ಸವಾಲು: ವಿಶ್ವಸಂಸ್ಥೆಯಲ್ಲಿ ಭಾರತ ಕಳವಳ

ಇದೀಗ ಈ ಹೇಳಿಕೆಯಲ್ಲಿನ ತಾಲಿಬಾನ್‌ನ ಉಲ್ಲೇಖವನ್ನು 15 ದಿನಗಳ ಬಳಿಕ ಯುಎನ್‌ಎಸ್‌ಸಿ ತೆಗೆದುಹಾಕಿದ್ದು, ಬಹುಶಃ ಈ ನಿರ್ಧಾರ ಭಾರತ ಸೇರಿದಂತೆ ಯುಎನ್‌ಎಸ್‌ಸಿ ಸದಸ್ಯ ರಾಷ್ಟ್ರಗಳು ತಾಲಿಬಾನಿಗಳನ್ನು 'ಜಾಗತಿಕ ಭಯೋತ್ಪಾದಕರು' ಅಲ್ಲ ಎಂಬಂತೆ ನೋಡುತ್ತವೆಯೇನೋ ಎಂದು ಸೂಚಿಸುವಂತಿದೆ.

ಆಗಸ್ಟ್​ 16ರಂದು ಭದ್ರತಾ ಮಂಡಳಿ ಹೊರಡಿಸಿದ್ದ ಹೇಳಿಕೆಯನ್ನು ತಮ್ಮ ಟ್ವಟರ್​ನಲ್ಲಿ ಹಂಚಿಕೊಂಡಿರುವ ವಿಶ್ವಸಂಸ್ಥೆಯ ಮಾಜಿ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್, "ರಾಜತಾಂತ್ರಿಕ ವಿಚಾರದಲ್ಲಿ 15 ದಿನಗಳೆಂಬುದು ದೀರ್ಘ ಸಮಯವಾಗಿದೆ. ಈಗ 'T' ಎಂಬ ಪದ ಬಿಟ್ಟು ಹೋಗಿದೆ" ಎಂದು ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ.

ಜಾಗತಿಕ ಉಗ್ರರ ಪಟ್ಟಿಯಿಂದ 'T' ಅಂದರೆ ತಾಲಿಬಾನ್​ ಎಂಬ ಗುಂಪು ಬಿಟ್ಟು ಹೋಗಿದೆ. ಇದಕ್ಕೆ ವಿಶ್ವಸಂಸ್ಥೆ ಬೆಂಬಲ ನೀಡುವಂತೆ ಕಾಣುತ್ತಿದೆ ಎಂಬ ಒಳಾರ್ಥ ಸೈಯದ್ ಅಕ್ಬರುದ್ದೀನ್ ಅವರ ಟ್ವೀಟ್​ನಲ್ಲಿರಬಹುದು. ಏಕೆಂದರೆ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲಿಬಾನ್​ ಗುರುತಿಸಿಕೊಳ್ಳಬೇಕೆಂದರೆ ಅಮಾಯಕ ಜನರನ್ನು ಬಲಿತೆಗೆದುಕೊಂಡ ಅವರಿಗೆ 'ಭಯೋತ್ಪಾದಕ ಗುಂಪು' ಎಂಬ ಹಣೆಪಟ್ಟಿ ಅಳಿಸಿ ಹಾಕಬೇಕಿದೆ. ಇದಕ್ಕೆ ವಿಶ್ವಸಂಸ್ಥೆಯ ಸಹಕಾರ ಖಂಡಿತವಾಗಿಯೂ ಬೇಕಿದೆ ಅನ್ನೋದು ಇಲ್ಲಿ ಗಮನಾರ್ಹ.

ABOUT THE AUTHOR

...view details