ವಾಷಿಂಗ್ಟನ್:ನವದೆಹಲಿಯ ಸರ್ವೋದಯ ಶಾಲೆಗೆ ಭೇಟಿ ನೀಡಿದ್ದ ಸಮಯವು ಮರೆಯಲಾಗದ ಕ್ಷಣ ಎಂದು ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ಗಳ ಮೂಲಕ ಧನ್ಯವಾದ ಸಲ್ಲಿಸಿರುವ ಅಮೆರಿಕ ಅಧ್ಯಕ್ಷರ ಪತ್ನಿ, ಭಾರತ ಪ್ರವಾಸದ ವೇಳೆ ನವದೆಹಲಿಯ ಸರ್ವೋದಯ ಶಾಲೆಯಲ್ಲಿ ಕಳೆದ ಕ್ಷಣಗಳನ್ನು ಸ್ಮರಿಸಿದ್ದಾರೆ. 'ಅದ್ಭುತ ಮಕ್ಕಳು ಹಾಗೂ ಸಿಬ್ಬಂದಿಯೊಂದಿಗೆ ಕಳೆದ ಸಮಯವು ಗೌರವಯುತವಾದದ್ದು. ನಿಮ್ಮ ಆತ್ಮೀಯ ಸ್ವಾಗತಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ.
ಹಾಗೆಯೇ ಸರ್ವೋದಯ ಶಾಲೆಯಲ್ಲಿನ ಹ್ಯಾಪಿನೆಸ್ ತರಗತಿ ಹಾಗೂ ಅಲ್ಲಿನ ಇತರ ಕಾರ್ಯಕ್ರಮಗಳು ಬಗ್ಗೆಯೂ ಕೂಡ ಮೆಲಾನಿಯಾ ಟ್ರಂಪ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸರ್ವೋದಯ ಶಾಲೆಯಲ್ಲಿ ತಮಗೆ ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಸಾಂಪ್ರದಾಯಿಕವಾಗಿ ಸ್ವಾಗತಕೋರಿರುವ ಬಗ್ಗೆಯೂ ಅವರು ಧನ್ಯವಾದ ಸಲ್ಲಿಸಿದ್ದಾರೆ.
ನವದೆಹಲಿಯ ಸರ್ವೋದಯ ಶಾಲೆಗೆ ಭೇಟಿ ನೀಡಿದ್ದ ವೇಳೆ ಮಕ್ಕಳು ಮೆಲಾನಿಯಾರಿಗೆ ಸಾಂಪ್ರದಾಯಿಕ ಸ್ವಾಗತ ಕೋರಿದ್ದರು. ಹ್ಯಾಪಿನೆಸ್ ತರಗತಿಗೆ ಹಾಜರಾಗಿದ್ದ ಮೆಲಾನಿಯಾ ಮಕ್ಕಳ ಜೊತೆ ಕುಳಿತು ಪಾಠ ಕೇಳಿದ್ದರು. ಮಕ್ಕಳಿಂದಲೇ ಹ್ಯಾಪಿನೆಸ್ ಕ್ಲಾಸ್ ಬಗ್ಗೆ ಮಾಹಿತಿ ಪಡೆದಿದ್ದು ವಿಶೇಷವಾಗಿತ್ತು.