ವಾಷಿಂಗ್ಟನ್( ಅಮೆರಿಕ): ಭಾರತ ಸರ್ಕಾರ ಲಸಿಕೆ ಪಡೆಯಲು ಸಿದ್ಧವಾದಾಗ COVID-19 ಲಸಿಕೆಗಳನ್ನು ತ್ವರಿತವಾಗಿ ರವಾನಿಸಲು ಸಿದ್ಧವಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಮಂಗಳವಾರ ಹೇಳಿದೆ. ಆದರೆ, ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಕಾನೂನು ನಿಬಂಧನೆಗಳನ್ನು ಪರಿಶೀಲಿಸಲು ಇನ್ನೂ ಹೆಚ್ಚಿನ ಸಮಯಬೇಕು ಎಂದು ಭಾರತ ತಿಳಿಸಿದ್ದು, ವಿತರಣೆ ಕೊಂಚ ತಡವಾಗಬಹುದೆಂದು ಅಮೆರಿಕ ಸರ್ಕಾರ ತಿಳಿಸಿದೆ.
ಭಾರತ ಸರ್ಕಾರ ತಿಳಿಸಿದ ಕೂಡಲೇ ಲಸಿಕೆ ರವಾನಿಸಲು ನಾವು ಸಿದ್ಧ ಎಂದು ರಾಜ್ಯ ಇಲಾಖೆಯ ವಕ್ತಾರ ನೆಡ್ ಪ್ರೈಸ್ ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬೈಡನ್ ನೇತೃತ್ವದ ಸರ್ಕಾರ ತನ್ನ ದೇಶೀಯ ದಾಸ್ತಾನು ಸಂಗ್ರಹದಿಂದ 80 ಮಿಲಿಯನ್ ಡೋಸ್ ಲಸಿಕೆಯನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಇತರ ರಾಷ್ಟ್ರಗಳಿಗೆ ನೀಡುವುದಾಗಿ ಘೋಷಿಸಿದೆ. ಇತ್ತೀಚಿನ ವಾರದಲ್ಲಿ, ಅಮೆರಿಕದ ಲಸಿಕೆಗಳು ಪಾಕಿಸ್ತಾನ, ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶ ಸೇರಿದಂತೆ ವಿಶ್ವದಾದ್ಯಂತ ಕೆಲ ದೇಶಗಳಿಗೆ ರವಾನೆ ಆಗಿದೆ.
ಆದರೆ, ಭಾರತಕ್ಕೆ ಲಸಿಕೆಗಳನ್ನು ಕಳುಹಿಸಲಾಗಲಿಲ್ಲ. ತುರ್ತು ಆಮದಿಗೆ ಅಗತ್ಯವಾದ ಕಾನೂನು ಅಡೆ-ತಡೆಗಳನ್ನು ಭಾರತ ಸರ್ಕಾರ ಇನ್ನೂ ತೆರವುಗೊಳಿಸದ ಹಿನ್ನೆಲೆ ಲಸಿಕೆ ರವಾನೆ ಆಗಿಲ್ಲ. ಪ್ರತಿ ದೇಶವು ತನ್ನದೇ ಆದ ದೇಶೀಯ ಕಾರ್ಯಾಚರಣೆಯ ಮತ್ತು ಕಾನೂನು ಪ್ರಕ್ರಿಯೆಗಳನ್ನು ಪ್ರತಿ ದೇಶಕ್ಕೆ ನಿರ್ದಿಷ್ಟಪಡಿಸಬೇಕು. ಈಗ, ಭಾರತವು ಇದಕ್ಕೆ ಸಂಬಂಧಿಸಿದ ಕಾನೂನು ನಿಬಂಧನೆಗಳನ್ನು ಪರಿಶೀಲಿಸಲು ಇನ್ನೂ ಹೆಚ್ಚಿನ ಸಮಯ ಬೇಕು ಎಂದು ನಿರ್ಧರಿಸಿದೆ. ಹಾಗಾಗಿ ಲಸಿಕೆ ಕಳುಹಿಸಲು ಇನ್ನೂ ಸಮಯ ಬೇಕಾಗಿದೆ ಎಂದು ಅಮೆರಿಕ ತಿಳಿಸಿದೆ.