ನ್ಯೂಯಾರ್ಕ್: ಭಯಾನಕ ಕೋವಿಡ್ ಅಲೆಯ ಸುಳಿಯಲ್ಲಿ ಸಿಲುಕಿರುವ ಭಾರತಕ್ಕೆ ಬೆಂಬಲವನ್ನು ಹೆಚ್ಚಿಸಲು ವಿಶ್ವಸಂಸ್ಥೆ ಸಿದ್ಧವಾಗಿದೆ ಎಂದು ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.
"ಭಾರತವು ಭೀಕರ ಕೋವಿಡ್ ಪರಿಸ್ಥಿತಿಯನ್ನು ಏಕಾಏಕಿ ಎದುರಿಸುತ್ತಿದ್ದು, ವಿಶ್ವಸಂಸ್ಥೆಯ ಕುಟುಂಬದೊಂದಿಗೆ ಸೇರಿ ನಾನು ಒಗ್ಗಟ್ಟಿನಿಂದ ನಿಲ್ಲುತ್ತೇನೆ. ಭಾರತಕ್ಕೆ ಬೆಂಬಲವನ್ನು ಹೆಚ್ಚಿಸಲು ಯುಎನ್ ಸಿದ್ಧವಾಗಿದೆ" ಎಂದು ಗುಟೆರೆಸ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ, ಈ ಸಮಯದಲ್ಲಿ ನಿಮ್ಮ ಭಾವನೆ ಮತ್ತು ಒಗ್ಗಟ್ಟನ್ನು ಭಾರತ ಬಹಳ ಪ್ರಶಂಸಿಸುತ್ತದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ವೆಂಟಿಲೇಟರ್, ಆಮ್ಲಜನಕ ಉತ್ಪಾದಕ ಕಳುಹಿಸಲಿರುವ ಜಪಾನ್
ಭಾರತದಲ್ಲಿ ದಿನವೊಂದರಲ್ಲಿ ಮೂರು ಲಕ್ಷಕ್ಕೂ ಅಧಿಕ ಕೊರೊನಾ ಕೇಸ್ಗಳು ಹಾಗೂ ಮೂರು ಸಾವಿರಕ್ಕೂ ಹೆಚ್ಚು ಸಾವು ವರದಿಯಾಗುತ್ತಿದೆ. ಈವರೆಗೆ 1,87,62,976 ಮಂದಿಗೆ ವೈರಸ್ ಅಂಟಿದ್ದು, 2,08,330 ಜನರು ಬಲಿಯಾಗಿದ್ದಾರೆ. ಅಮೆರಿಕ, ಇಂಗ್ಲೆಂಡ್, ಜಪಾನ್, ರಷ್ಯಾ, ಫ್ರಾನ್ಸ್ ಸೇರಿದಂತೆ ಜಗತ್ತಿನ 40ಕ್ಕೂ ಹೆಚ್ಚು ರಾಷ್ಟ್ರಗಳು ಭಾರತಕ್ಕೆ ತುರ್ತು-ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಡುತ್ತಿವೆ.