ನ್ಯೂಯಾರ್ಕ್:ಬಡರೋಗಿಗಳು, ಅನಾಥರು, ನಿರ್ಗತಿಕರ ಸೇವೆಯಲ್ಲಿಯೇ ಜೀವನ ಕಳೆದಿದ್ದ ಮದರ್ ತೆರೇಸಾ ಅವರ 111ನೇ ಜನ್ಮದಿನವಿಂದು. ಅವರ ಜನ್ಮ ವಾರ್ಷಿಕೋತ್ಸದ ಅಂಗವಾಗಿ ವಿಶ್ವಸಂಸ್ಥೆ ಆಗಸ್ಟ್ 12 ರಂದು ಅಂಚೆ ಚೀಟಿ ಬಿಡುಗಡೆ ಮಾಡಿ ಗೌರವ ಸಲ್ಲಿಸಿದೆ. ಈ ವಿಚಾರವನ್ನು ಇಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಮತ್ತು ಭದ್ರತಾ ಮಂಡಳಿಯ ಅಧ್ಯಕ್ಷರಾಗಿರುವ ಟಿಎಸ್ ತಿರುಮೂರ್ತಿ ಹಂಚಿಕೊಂಡಿದ್ದಾರೆ.
ಈ ಸ್ಟಾಂಪ್, ನೊಬೆಲ್ ಪ್ರಶಸ್ತಿ ವಿಜೇತೆ, ಭಾರತ ರತ್ನ ಮದರ್ ತೆರೇಸಾ ಅವರ ಪೋಟೋ ಹಾಗೂ "ನಾವೆಲ್ಲರೂ ದೊಡ್ಡ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ, ಆದರೆ, ಬಹಳ ಪ್ರೀತಿಯಿಂದ ಸಣ್ಣ ಕೆಲಸಗಳನ್ನು ಮಾಡಬಹುದು" ಎಂಬ ಅವರ ಸಂದೇಶವನ್ನು ಹೊಂದಿದೆ. ಅಂಚೆ ಚೀಟಿಯ ಫೋಟೋವನ್ನು ತಮ್ಮ ಟ್ವಿಟರ್ನಲ್ಲಿ ತಿರುಮೂರ್ತಿ ಶೇರ್ ಮಾಡಿದ್ದಾರೆ.
'ಕಲ್ಕತ್ತಾದ ಸಂತ ತೆರೇಸಾ' ಎಂದು ಕ್ಯಾಥೊಲಿಕ್ ಚರ್ಚ್ನಿಂದ ಗೌರವಿಸಲ್ಪಟ್ಟ ಮದರ್ ತೆರೇಸಾ, 1910ರ ಆಗಸ್ಟ್ 26 ರಂದು ಮ್ಯಾಸಿಡೋನಿಯಾದ ರಾಜಧಾನಿ ಸ್ಕೋಪ್ಜೆಯಲ್ಲಿ ಜನಿಸಿದ್ದರು. 1929ರಲ್ಲಿ ಭಾರತಕ್ಕೆ ಬಂದ ಅವರು ಇಂದಿನ ಕೋಲ್ಕತ್ತಾದಲ್ಲಿ ಸೇಂಟ್ ಮೇರಿಸ್ ಬಾಲಕಿಯರ ಶಾಲೆಯಲ್ಲಿ ಬೋಧನೆ ಆರಂಭಿಸಿದರು. 1948 ರಲ್ಲಿ ತಮ್ಮ ಬೋಧನಾ ಕೆಲಸವನ್ನು ಬಿಟ್ಟು ಬಡವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಡವರು, ನಿರ್ಗತಿಕರು, ಕುಷ್ಠರೋಗ, ಕ್ಷಯ ಮತ್ತು ಎಚ್ಐವಿ/ಏಡ್ಸ್ ರೋಗಿಗಳ ಸೇವೆಗಾಗಿಯೇ 1950ರಲ್ಲಿ ಮಿಷನರೀಸ್ ಆಫ್ ಚಾರಿಟಿ ಸ್ಥಾಪಿಸಿದರು.
ಇವರ ನಿಸ್ವಾರ್ಥ ಸೇವೆಗೆ 1962 ರಲ್ಲಿ ರಾಮನ್ ಮ್ಯಾಗ್ಸೆಸೆ ಶಾಂತಿ ಪ್ರಶಸ್ತಿ, 1979 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಮತ್ತು 1980 ರಲ್ಲಿ ಭಾರತ ರತ್ನ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿ ತೆರೇಸಾರನ್ನು ಗೌರವಿಸಲಾಗಿದೆ. 1997ರ ಸೆಪ್ಟೆಂಬರ್ 5ರಂದು ಮರಣ ಹೊಂದಿದ ಇವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾರತ ಸರ್ಕಾರ ನೆರವೇರಿಸಿತು.