ನ್ಯೂಯಾರ್ಕ್: ಪ್ರತಿವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಗುತ್ತದೆ. ಇದರ ಭಾಗವಾಗಿ ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳನ್ನು ರಕ್ಷಿಸಬೇಕಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕರೆ ನೀಡಿದ್ದಾರೆ.
ವಿಶ್ವ ಜನಸಂಖ್ಯಾ ದಿನವನ್ನುದ್ದೇಶಿಸಿ ಮಾತನಾಡಿರುವ ಗುಟೆರಸ್, ವಿಶ್ವ ಜನಸಂಖ್ಯಾ ದಿನದ ಗುರುತಾಗಿ ಪ್ರತಿಯೊಬ್ಬರ ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸುವ ಪ್ರತಿಜ್ಞೆ ಮಾಡೋಣ ಎಂದಿದ್ದಾರೆ.
ಕೋವಿಡ್, ಇಡೀ ವಿಶ್ವವನ್ನು ಕಠೋರವಾಗಿ ಕಾಡುವುದನ್ನು ಮುಂದುವರಿಸಿದೆ. ಲಕ್ಷಾಂತರ ಜೀವಗಳ ದುರಂತ ಅಂತ್ಯದ ಜೊತೆಗೆ ಇದೀಗ ಕಡಿಮೆ ಸಾವಿನ ಪ್ರಕರಣ ಕಂಡು ಬರುತ್ತಿವೆ. ಕೌಟುಂಬಿಕ ಹಿಂಸೆ ಪ್ರಕರಣಗಳು ಆಘಾತಕಾರಿಯಾಗಿ ಹೆಚ್ಚಳವಾಗಿವೆ. ಮಕ್ಕಳನ್ನು ಪಡೆಯುವ ಉದ್ದೇಶವಿಲ್ಲದೆ ಗರ್ಭನಿರೋಧಕ ಸೇವೆಗಳನ್ನು ಬಳಸುವುದು ಮತ್ತು ಮಾತೃತ್ವದ ಮುಂದೂಡಿಕೆಯಿಂದ ಹೆರಿಗೆ ವಾರ್ಡ್‌ಗಳು ಖಾಲಿಯಾಗಿವೆ ಎಂದರು.
ನಮ್ಮ ಇತ್ತೀಚಿನ ಅಂದಾಜಿನ ಪ್ರಕಾರ ಕೋವಿಡ್‌ನಿಂದಾಗಿ 4.7 ಕೋಟಿ ಮಹಿಳೆಯರು ಮತ್ತು ಮಕ್ಕಳು ತೀವ್ರ ಬಡತನಕ್ಕೆ ಸಿಲುಕಿದ್ದಾರೆ. ಶಾಲೆಯಿಂದ ಹೊರ ನಡೆದ ಸಾಕಷ್ಟು ಹೆಣ್ಣುಮಕ್ಕಳು ವಾಪಸ್ ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಕಷ್ಟದ ಗಳಿಕೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಆಯ್ಕೆಗಳು ಕುಸಿಯುತ್ತಿರುವುದು ವಿಶ್ವದ ಪ್ರತಿ ಮೂಲೆಯಲ್ಲಿಯೂ ಗೋಚರವಾಗುತ್ತಿದೆ. ಸಾಂಕ್ರಾಮಿಕ ಆರಂಭದೊಂದಿಗೆ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಯ ಸಂಪನ್ಮೂಲಗಳ ದಿಕ್ಕು ಬದಲಾಗಿದೆ. ಆರೋಗ್ಯ ಹಕ್ಕುಗಳಲ್ಲಿನ ಈ ವ್ಯತ್ಯಯವು ಸ್ವೀಕಾರಾರ್ಹವಲ್ಲ. ಈ ಹೋರಾಟದಲ್ಲಿ ಮಹಿಳೆಯನ್ನು ಒಂಟಿ ಮಾಡಲಾಗದು ಎಂದೂ ಗುಟೆರಸ್ ತಿಳಿಸಿದ್ದಾರೆ.
ಜಾಗತಿಕ ಜನಸಂಖ್ಯೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 11ನ್ನು ವಿಶ್ವ ಜನಸಂಖ್ಯಾ ದಿನವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಆಡಳಿತ ಮಂಡಳಿಯು 1989ರಲ್ಲಿ ಮೊದಲ ಸಲ ಈ ಕಾರ್ಯಕ್ರಮ ಆಯೋಜಿಸಿತು.