ವಿಶ್ವಸಂಸ್ಥೆ:ಲಿಬಿಯಾದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಅಲ್ಲಿನ 27 ಜೈಲುಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಂಧಿತರನ್ನು ಇರಿಸಲಾಗಿದೆ. ಸಾವಿರಾರು ಮಂದಿಗೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮಾಹಿತಿ ನೀಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಲಿಬಿಯಾದ ಸಶಸ್ತ್ರ ಪಡೆಗಳು ನಿರಾಶ್ರಿತರು, ವಲಸಿಗರ ಮೇಲೆ ಸಾಕಷ್ಟು ನಿರ್ಬಂಧ ವಿಧಿಸಿವೆ. ದೌರ್ಜನ್ಯ, ಚಿತ್ರಹಿಂಸೆ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗುತ್ತಿದ್ದು, ಈ ಕುರಿತಂತೆ ಯುಎನ್‌ಎಸ್‌ಎಂಐಎಲ್ ಎಂದು ಕರೆಯಲ್ಪಡುವ ಯುಎನ್ ಮಿಷನ್ ಅನೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದನ್ನು ಮುಂದುವರೆಸಿದೆ ಎಂದು ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.
ಬಂಧಿತರು 12 ಸಾವಿರ ಮಂದಿ ಎಂಬುದು ಲಿಬಿಯಾದ ಅಧಿಕಾರಿಗಳು ನೀಡಿದ ಮಾಹಿತಿಯಾಗಿದೆ. ಅದಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಅಲ್ಲಿನ ವಲಸಿಗರು, ನಿರಾಶ್ರಿತರ ಮಾನವ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ವಿಚಾರದಲ್ಲಿ ನಾನು ಕಳವಳಕ್ಕೆ ಒಳಗಾಗಿದ್ದೇನೆ ಎಂದು ಆಂಟೋನಿಯೋ ಗುಟೆರಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.
ಇದಷ್ಟೇ ಅಲ್ಲದೇ ಲಿಬಿಯಾದ ನಿರಾಶ್ರಿತ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ಲೈಂಗಿಕ ಕಿರುಕುಳ ನಡೆಯುತ್ತಿದೆ. ಲಿಬಿಯಾ ಗೃಹ ಸಚಿವಾಲಯದ ಅಡಿ ಬರುವ ಅಕ್ರಮ ವಲಸೆ ನಿಯಂತ್ರಣ ನಿರ್ದೇಶಾನಾಲಯದ ಅಧಿಕಾರಿಗಳೂ ಮಾನವ ಕಳ್ಳಸಾಗಣೆ, ಅತ್ಯಾಚಾರದಂತ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಗುಟೆರಸ್ ಹೇಳಿದ್ದಾರೆ.