ವಾಷಿಂಗ್ಟನ್(ಅಮೆರಿಕ): ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಗುರುವಾರ ಸಂಜೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕಾಬೂಲ್ ಮತ್ತು ವಿಶೇಷವಾಗಿ ವಿಮಾನ ನಿಲ್ದಾಣದಲ್ಲಿರುವ ಸದ್ಯದ ಪರಿಸ್ಥಿತಿಗೆ ಪ್ರಧಾನ ಕಾರ್ಯದರ್ಶಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಗುಟೇರಸ್ ಸಂತಾಪ ಸೂಚಿಸಿದ್ದಾರೆ ಎಂದು ಮಹಾಪ್ರಧಾನ ಕಾರ್ಯದರ್ಶಿಯವರ ವಕ್ತಾರ ಸ್ಟೆಫೇನ್ ಡುಜಾರಿಕ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಆಫ್ಘನ್ನಲ್ಲಿ ಪರಿಸ್ಥಿತಿ ಸರಿಯಿಲ್ಲ ಎಂಬುದನ್ನು ಈ ಘಟನೆ ಎತ್ತಿ ತೋರಿಸುತ್ತದೆ. ನಾವು ಆಫ್ಘನ್ ಜನರಿಗೆ ನೆರವು ನೀಡುತ್ತಲೇ ಇದ್ದು, ಮತ್ತಷ್ಟು ತುರ್ತು ನೆರವು ನೀಡಲಾಗುತ್ತದೆ ಎಂದು ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಈ ದಾಳಿಯ ಅಪರಾಧಿಗಳ ಬಗ್ಗೆ ಮಾಹಿತಿ ಇಲ್ಲ. ಈಗಾಗಲೇ ಹತಾಶರಾಗಿರುವ ಜನರು, ಮಕ್ಕಳನ್ನು ಗುರಿಯಾಗಿಸಿ ನಡೆದಿರುವ ದಾಳಿ ಅತ್ಯಂತ ಭಯಾನಕ ಮತ್ತು ಹೇಯ ಕೃತ್ಯ ಎಂದು ಗುಟೆರಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಮಾನ ನಿಲ್ದಾಣದ ಸುತ್ತಲೂ ಕೆಲವು ವಿಶ್ವಸಂಸ್ಥೆಯ ಸಿಬ್ಬಂದಿಯೂ ಇದ್ದು, ಅವರೆಲ್ಲರ ಸುರಕ್ಷಿತವಾಗಿ ಇರುವುದಾಗಿ ವರದಿ ಮಾಡಿಕೊಂಡಿದ್ದಾರೆ. ಉಳಿದವರು ಸುರಕ್ಷಿತವಾಗಿ ಇದ್ದಾರೆ ಎಂದು ನಾವು ಭಾವಿಸುತ್ತೇವೆ ಎಂದು ಡುಜಾರಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದ ಹೊರಗಡೆ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 60 ಜನ ಪ್ರಾಣ ಕಳೆದುಕೊಂಡಿದ್ದು ಹಲವರು ಗಾಯಗೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಐಸಿಸ್-ಕೆ ಒಪ್ಪಿಕೊಂಡಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ:ಕಾಬೂಲ್ ದಾಳಿ ಕ್ಷಮಿಸಲ್ಲ, ಮರೆಯುವುದೂ ಇಲ್ಲ, ಬೇಟೆಯಾಡಿ ಉತ್ತರ ಕೊಡುತ್ತೇವೆ: ಬೈಡನ್ ಶಪಥ