ವಿಶ್ವಸಂಸ್ಥೆ:ಅಫ್ಘಾನಿಸ್ತಾನವು ಮಾಡು ಇಲ್ಲವೇ ಮಡಿ ಸಂದರ್ಭವನ್ನು ಎದುರಿಸುತ್ತಿದೆ. ಆ ದೇಶದ ಆರ್ಥಿಕತೆ ಕುಸಿಯದಂತೆ ತಡೆಯಲು ಎಲ್ಲಾ ರಾಷ್ಟ್ರಗಳು ಮುಂದಾಗಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೋ ಗುಟೆರಸ್ ಮನವಿ ಮಾಡಿದ್ದಾರೆ.
ನ್ಯೂಯಾರ್ಕ್ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಅವರು, ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಆ ದೇಶದ ಮಹಿಳೆಯರಿಗೆ ಕೆಲಸ ಮಾಡಲು ಮತ್ತು ಬಾಲಕಿಯರಿಗೆ ಎಲ್ಲಾ ಹಂತದ ಶಿಕ್ಷಣವನ್ನು ಪಡೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದು, ಈಗಾಗಲೇ ಅಫ್ಘನ್ನ 80ರಷ್ಟು ಆರ್ಥಿಕತೆ ಕುಸಿಸಿದೆ. ಮಹಿಳೆಯರ ಒಳಗೊಳ್ಳುವಿಕೆ ಇಲ್ಲದೇ ಅಫ್ಘನ್ ಆರ್ಥಿಕತೆ ಮತ್ತು ಸಮಾಜ ಚೇತರಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲ ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನಕ್ಕೆ ನೆರವು ನೀಡಿ..
ತಾಲಿಬಾನ್ ವಶವಾಗುವುದಕ್ಕೆ ಮೊದಲು ಅಫ್ಘಾನಿಸ್ತಾನ ಅಂತಾರಾಷ್ಟ್ರೀಯ ನೆರವಿನ ಮೇಲೆ ಅವಲಂಬಿತವಾಗಿತ್ತು. ಈಗ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳು ನೆರವು ನೀಡುವುದನ್ನು ನಿಲ್ಲಿಸಿವೆ. ಇದರಿಂದಾಗಿ ಅಫ್ಘಾನಿಸ್ತಾನದ ಆರ್ಥಿಕತೆ ಕುಸಿಯುತ್ತಿದೆ. ರಾಷ್ಟ್ರಗಳು ಅಫ್ಘಾನಿಸ್ತಾನಕ್ಕೆ ನಗದು ಹರಿಯುವಂತೆ ನೋಡಿಕೊಳ್ಳಬೇಕು. ಈ ಮೂಲಕ ಆರ್ಥಿಕತೆ ಕುಸಿಯದಂತೆ ನೋಡಿಕೊಳ್ಳಬೇಕೆಂದು ಗುಟೆರಸ್ ಹೇಳಿದ್ದಾರೆ.