ವಾಷಿಂಗ್ಟನ್ ಡಿಸಿ (ಅಮೆರಿಕ):ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದ್ದು ಇದನ್ನು ಅನೇಕ ರಾಷ್ಟ್ರಗಳು ಖಂಡಿಸಿವೆ. ಮತ್ತೆ ಕೆಲವು ರಷ್ಯಾವನ್ನು ಬೆಂಬಲಿಸಿವೆ. ಭಾರತ ಪರ ವಿರೋಧ ಇಲ್ಲದೇ ತಟಸ್ಥ ನಿರ್ಧಾರ ಕೈಗೊಂಡಿದೆ. ಉಕ್ರೇನ್ ಬಿಕ್ಕಟ್ಟಿನಲ್ಲಿ ಭಾರತ ಕಠಿಣ ಮಧ್ಯಸ್ಥಿಕೆಯನ್ನು ವಹಿಸುತ್ತಿದೆ ಎಂಬುದನ್ನು ಗಮನಿಸಿದ ಇಬ್ಬರು ಡೆಮಾಕ್ರಟಿಕ್ ನಾಯಕರು ಬುಧವಾರದಂದು ಉಕ್ರೇನ್ ವಿರುದ್ಧ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳನ್ನು ಖಂಡಿಸುವಂತೆ ಭಾರತವನ್ನು ಒತ್ತಾಯಿಸಿದರು.
ಅಮೆರಿಕದಲ್ಲಿನ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರಿಗೆ ಪತ್ರ ಬರೆದಿರುವ ಅಮೆರಿಕ ಕಾಂಗ್ರೆಸ್‌ನ ಟೆಡ್ ಡಬ್ಲ್ಯೂ ಲಿ ಮತ್ತು ಟಾಮ್ ಮಲಿನೋವ್ಸ್ಕಿ, 'ರಷ್ಯಾದೊಂದಿಗಿನ ಭಾರತದ ಸಂಬಂಧವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೂ, ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರವಿರುವ ನಿಮ್ಮ ಸರ್ಕಾರದ ನಿರ್ಧಾರದಿಂದ ನಾವು ನಿರಾಶೆಗೊಂಡಿದ್ದೇವೆ.
ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ನಿಯಮಾಧಾರಿತ ಆದೇಶವನ್ನು ದುರ್ಬಲಗೊಳಿಸುತ್ತಿದೆ. ಉಕ್ರೇನ್ ಮೇಲೆ ಆಕ್ರಮಣ ನಡೆಸುವ ಮೂಲಕ ಭಾರತವನ್ನು ರಕ್ಷಿಸುವಂತಹ ನಿಯಮಗಳನ್ನು ಸಹ ನಾಶಪಡಿಸಲು ರಷ್ಯಾ ಪ್ರಯತ್ನಿಸುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.
ವಿಶ್ವಸಂಸ್ಥೆ ಮತ್ತು ಪ್ರಾದೇಶಿಕ ಸಮಗ್ರತೆಯ ತತ್ವಗಳಿಗೆ ಭಾರತದ ಐತಿಹಾಸಿಕ ಬೆಂಬಲವನ್ನು ಗಮನಿಸಿದರೆ ಉಕ್ರೇನಿಯನ್ ಸಾರ್ವಭೌಮತ್ವವನ್ನು ಬೆಂಬಲಿಸಲು ಭಾರತವು ಇತರ ಪ್ರಜಾಪ್ರಭುತ್ವ ದೇಶಗಳೊಂದಿಗೆ ಸೇರಿಕೊಳ್ಳುತ್ತದೆ ಎಂಬ ಭರವಸೆಯನ್ನು ನೀಡುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.