ವಾಷಿಂಗ್ಟನ್:ಅಮೆರಿಕಾದಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕ್ ಪಕ್ಷಗಳ ನಾಯಕರಲ್ಲಿ ಸಮರ ಶುರುವಾಗಿದೆ. ಕೆಲ ತಿಂಗಳ ಹಿಂದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಯಡವಟ್ಟಿನಿಂದ ಈಗ ಟ್ರಂಪ್ ವಾಗ್ದಂಡನೆಗೆ ಎಲ್ಲೆಡೆ ಒತ್ತಾಯ ಶುರುವಾಗಿದೆ.
ಕಳೆದ ಜುಲೈ 25 ರಂದು ಉಕ್ರೇನ್ ಆಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿಗೆ ಕರೆ ಮಾಡಿದ್ದ ಟ್ರಂಪ್, ಅಮೆರಿಕಾ ಡೆಮಾಕ್ರಟಿಕ್ ಪಕ್ಷದ ನಾಯಕ ಜೋ ಬಿಡೆನ್ ಮತ್ತು ಅವರ ಮಗ ಹಂಟರ್ ಬಿಡೆನ್, ಉಕ್ರೇನ್ನಲ್ಲಿ ಪಾಲುದಾರರಾಗಿರುವ ಉದ್ಯಮದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಗಮನಹರಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ಡೆಮಾಕ್ರಟಿಕ್ ಪಕ್ಷ, ರಿಪಬ್ಲಿಕ್ ಪಕ್ಷದ ಟ್ರಂಪ್ ವಾಗ್ದಂಡನೆಗೆ ಒತ್ತಾಯಿಸಿದೆ.
ಅಮೆರಿಕಾ ಅಧ್ಯಕ್ಷ ಟ್ರಂಪ್ ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆದುಕೊಂಡಿದ್ದು ಅವರ ವಿರುದ್ಧ ವಾಗ್ದಂಡನೆ ಮಂಡಿಸಬೇಕು ಎಂದು ಜೋ ಬಿಡೆನ್ ಒತ್ತಾಯಿಸಿದ್ದಾರೆ. ಈ ಬೆನ್ನಲ್ಲೇ ಈ ವಿಚಾರವಾಗಿ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಸಾರ್ವಜನಿಕರ ವಿಚಾರಣೆ ಆರಂಭಗೊಂಡಿದೆ. ಡೆಮಾಕ್ರಟಿಕ್ ಬೆಂಬಲಿಗರು ವಾಗ್ದಂಡನೆಗೆ ದುಂಬಾಲು ಬಿದ್ದಿದ್ದು, ವಿಚಾರಣೆ ಬಳಿಕ ಏನಾಗುತ್ತದೆ ನೋಡಬೇಕಿದೆ.
2020 ಸಮೀಪಿಸುತ್ತಿದ್ದಂತೆ ಮುಂದಿನ ಚುನಾವಣೆಗಾಗಿ ಸ್ಟ್ರಾಟೆಜಿ ರೂಪುಗೊಳ್ಳುತ್ತಿದೆ. ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಟ್ರಂಪ್ ದೋಷಾರೋಪಣೆ ಮತದಾರರನ್ನು ಸೆಳೆಯಲು ಸಿಕ್ಕ ಅವಕಾಶದಂತಾಗಿದೆ. ಈಗಾಗಲೇ ನಡೆದ ಸಮೀಕ್ಷೆಯ ಮಾಹಿತಿ ಪ್ರಕಾರ ಹೆಚ್ಚಿನ ಜನರು ಟ್ರಂಪ್ ದೋಷಾರೋಪಣೆಯನ್ನು ಬೆಂಬಲಿಸುತ್ತಿದ್ದಾರೆ. ಆದರೆ ಮುಂದೆ ನಡೆಯುವ ವಿಚಾರಣೆ ಜನರ ಮನಸ್ಥಿತಿಯನ್ನು ಬದಲಾಯಿಸುವ ಸಾಧ್ಯತೆ ಇದೆ.
ಈ ಸಂಬಂಧ ಟೆಲಿವಿಷನ್ ವಿಚಾರಣೆ ಬುಧವಾರದಿಂದ ಪ್ರಾರಂಭವಾಗಲಿದೆ. ಇದು ಶುಕ್ರವಾರದವರೆಗೂ ಮುಂದುವರಿಯಲಿದೆ. ಈ ವೇಳೆ ಮೂರು ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯುತ್ತದೆ. ತಮ್ಮ ಕಚೇರಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಟ್ರಂಪ್ ಬಗ್ಗೆ ಈ ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯಲಿದೆ.
ಜೋ ಬಿಡೆನ್ ಉಪಾಧ್ಯಕ್ಷರಾಗಿದ್ದಾಗ ಉಕ್ರೇನಿಯನ್ ನೈಸರ್ಗಿಕ ಅನಿಲ ಕಂಪನಿಯೊಂದರ ಮಂಡಳಿಗೆ ಅವರ ಪುತ್ರ ಹಂಟರ್ ಬಿಡೆನ್ ನೇಮಕವಾಗಿದ್ದರು. ಹಂಟರ್ ಅವರನ್ನು ಏಕೆ ಮತ್ತು ಹೇಗೆ ನೈಸರ್ಗಿಕ ಅನಿಲ ಕಂಪನಿಯೊಂದರ ಮಂಡಳಿಗೆ ನೇಮಿಸಲಾಯಿತು ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಟ್ರಂಪ್ ಉಕ್ರೇನ್ ಆಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿಗೆ ಹೇಳಿದ್ದರು.