ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಗಾದಿಗೆ ಎರಡನೇ ಬಾರಿ ಆಯ್ಕೆಯಾಗುವಲ್ಲಿ ವಿಫಲರಾಗಿರುವ ಡೊನಾಲ್ಡ್ ಟ್ರಂಪ್, ಅಧಿಕಾರದ ವ್ಯಾಮೋಹದಿಂದಾಗಿ ಬಹಳಷ್ಟು ಶ್ರಮ ವಹಿಸಿದರೂ ಸಹ ಎಲ್ಲವೂ ವಿಫಲಗೊಂಡಿವೆ. ಅದಲ್ಲದೆ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಕಟ್ಟಡದ ಮೇಲೆ ನಡೆಸಿದ ದಾಳಿಯಿಂದಾಗಿ ಇಡೀ ಅಮೆರಿಕವೇ ಅಲ್ಲೋಲ ಕಲ್ಲೋಲಗೊಂಡಿದ್ದು, ಇದರ ಹೊಣೆಯನ್ನೂ ಸಹ ಟ್ರಂಪ್ ಮೇಲೆಯೇ ಹೊರಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಲಿದ್ದು, ಈ ಮಧ್ಯೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ (ಅಮೆರಿಕ ಸಂಸತ್ತಿನ ಕೆಳಮನೆ) ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಅಂಗೀಕರಿಸಲು ಮುಂದಾಗಿದೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಲಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲಿನ ದೋಷಾರೋಪಣೆ ವಿಚಾರಣೆ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ವೇಳೆ ಅಮೆರಿಕದ ಕ್ಯಾಪಿಟಲ್ ಗಲಭೆಗೆ ಕಾರಣವಾಗಿರುವ ಅಧ್ಯಕ್ಷರನ್ನು ಶಿಕ್ಷೆಗೊಳಪಡಿಸಬೇಕು ಎಂದು ಟ್ರಂಪ್ ಪಕ್ಷದ ಸೆನೆಟ್ ಸದಸ್ಯ ಮಿಚ್ಮೆಕ್ಕಾನ್ನೆಲ್ ಹೇಳಿರುವುದು ಟ್ರಂಪ್ಗೆ ಅತ್ಯಂತ ಹಿನ್ನಡೆಯುಂಟುಮಾಡಿದೆ. ಅದಲ್ಲದೆ, ಈ ಹೇಳಿಕೆ ನೀಡುವ ವೇಳೆ ಇದು ನನ್ನ ಆತ್ಮಸಾಕ್ಷಿಯಿಂದಾಗಿ ಹೇಳುತ್ತಿರುವ ಹೇಳಿಕೆ ಎಂದಿರುವುದು ರಿಪಬ್ಲಿಕನ್ ಪಕ್ಷದವರೇ ಟ್ರಂಪ್ಗೆ ಬೆಂಬಲ ನೀಡುತ್ತಿಲ್ಲ ಎಂಬುದನ್ನು ಎತ್ತಿ ತೋರಿಸಿದಂತಾಗಿದೆ.
ಅಮೆರಿಕದ ಕ್ಯಾಪಿಟಲ್ ಮೇಲೆ ನಡೆಸಲಾದ ದಾಳಿಗೆ ಟ್ರಂಪ್ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಟ್ರಂಪ್ ವಿರುದ್ಧದ ವಾಗ್ದಂಡನೆ ನಿಲುವಳಿಗೆ ಸದನದಲ್ಲಿ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ 10 ಸದಸ್ಯರು ಕೂಡ ಸೆನೆಟ್ನಲ್ಲಿ ಮಂಡಿಸುವ ನಿಲುವಳಿಗೆ ಬೆಂಬಲಿಸುವುದಾಗಿ ಹೇಳಿದ್ದಾರೆ.
ಕಳೆದ 4 ವರ್ಷದ ಅಧಿಕಾರವಧಿಯಲ್ಲಿ ವಿವಾದಾತ್ಮಕ ಹೇಳಿಕೆ, ವರ್ತನೆಯಿಂದಲೇ ಗಮನ ಸೆಳೆದಿದ್ದ ಡೊನಾಲ್ಡ್ ಟ್ರಂಪ್ ಇದೀಗ ತಮ್ಮ ವಿರುದ್ಧ ವಾಗ್ದಂಡನೆ ಮಂಡಿಸುವ ನಿರ್ಣಯ ಅಂಗೀಕಾರವಾಗಿದ್ದರೂ ಸಹ ಏನೂ ಮಾಡಲಾಗದೆ ಅಸಹಾಯಕರಾಗಿದ್ದಾರೆ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನೀಡಿದ ಮತದ ಆಧಾರದ ಮೇಲೆ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕೂಡ ಸಹಿ ಹಾಕಿದ್ದಾರೆ. ಸಂಸತ್ತಿನ ಕೆಳಮನೆಯಲ್ಲಿ ಒಪ್ಪಿಗೆ ಸಿಕ್ಕಂತೆ ಸಂಸತ್ತಿನ ಮೇಲ್ಮನೆಯಲ್ಲಿಯೂ ಸಹ ಒಪ್ಪಿಗೆ ದೊರೆತರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನದಿಂದ ವಜಾಗೊಳ್ಳುವುದು ಖಚಿತವಾಗಿದೆ.
ಜನವರಿ 20, 2021ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಈ ಬಳಿಕ ಸೆನೆಟ್ನಲ್ಲಿ ವಾಗ್ದಂಡನೆಗೆ ಜಯ ದೊರೆತರೆ ಡೊನಾಲ್ಡ್ ಟ್ರಂಪ್ ಮುಂದಿನ ಚುನಾವಣೆಯಲ್ಲಿಯೂ ಸಹ ಸ್ಪರ್ಧಿಸಲು ಅವಕಾಶ ವಂಚಿತರಾದಂತಾಗುತ್ತದೆ.