ವಾಷಿಂಗ್ಟನ್ (ಅಮೆರಿಕಾ): ಉತ್ತರ ಕೆರೊಲಿನಾ, ಓಹಿಯೋ ಮತ್ತು ವಿಸ್ಕಾನ್ಸಿನ್‌ನ ಮೂರು ಸ್ವಿಂಗ್ ರಾಜ್ಯಗಳಲ್ಲಿ ಪ್ರಚಾರ ರ್ಯಾಲಿಗಳನ್ನು ನಡೆಸುವ ಮೊದಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ಖುದ್ದಾಗಿ ಮತ ಚಲಾಯಿಸಲಿದ್ದಾರೆ.
ಕಳೆದ ವರ್ಷ ಟ್ರಂಪ್ ತಮ್ಮ ಶಾಶ್ವತ ನಿವಾಸ ಮತ್ತು ಮತದಾರ ನೋಂದಣಿಯನ್ನು ನ್ಯೂಯಾರ್ಕ್ನಿಂದ ಫ್ಲೋರಿಡಾಕ್ಕೆ ಸ್ಥಳಾಂತರಿಸಿದ್ದರು. ಇದು ಅವರ ಮರುಚುನಾವಣೆಗೆ ನಿರ್ಣಾಯಕ ರಾಜ್ಯವಾಗಿದೆ ಎಂದು ರಾಯಿಟರ್ಸ್ ವರದಿಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಸ್ವಿಂಗ್ ರಾಜ್ಯವಾದ ಫ್ಲೋರಿಡಾವನ್ನು ಟ್ರಂಪ್ ಶೇ 49.02ರಷ್ಟು ಮತಗಳಿಂದ ಗೆದ್ದಿದ್ದು, ಅವರ ಆಗಿನ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ಶೇಕಡಾ 47.82ರಷ್ಟು ಮತಗಳನ್ನು ಗಳಿಸಿದ್ದರು.
ಮತದಾನದ ನಂತರ ಟ್ರಂಪ್ ಮೂರು ರಾಜ್ಯಗಳಲ್ಲಿ ರ್ಯಾಲಿಗಳನ್ನು ನಡೆಸಲಿದ್ದಾರೆ. ಇಂದು ಜೋ ಬಿಡೆನ್ ಪೆನ್ಸಿಲ್ವೇನಿಯಾದಲ್ಲಿ ಡ್ರೈವ್-ಇನ್ ರ್ಯಾಲಿಗಳನ್ನು ನಡೆಸಿದ್ದಾರೆ.
ಈ ಬಾರಿ ಅತಿಹೆಚ್ಚು ಮಂದಿ ಮತದಾನ ನಡೆಸಲು ದಾಖಲಾತಿ ಮಾಡಿದ್ದಾರೆ. ಹೀಗಾಗಿ ಹೆಚ್ಚಿನ ಮತದಾನದ ನಿರೀಕ್ಷೆಯಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಬಿಡೆನ್ ಅವರ ಮುಂದಿನ ಯೋಜಿತ ರ್ಯಾಲಿಗಳು ಫಿಲಡೆಲ್ಫಿಯಾದ ಉತ್ತರದ ಬಕ್ಸ್ ಕೌಂಟಿ ಮತ್ತು ಲುಜೆರ್ನ್ ಕೌಂಟಿಯಲ್ಲಿ ಅವರ ಜನ್ಮಸ್ಥಳವಾದ ಸ್ಕ್ರಾಂಟನ್ ಬಳಿ ನಡೆಯಲಿದೆ.
ಬುಧವಾರ ಬಿಡುಗಡೆಯಾದ ಇತ್ತೀಚಿನ ರಾಯಿಟರ್ಸ್ / ಇಪ್ಸೊಸ್ ಅಭಿಪ್ರಾಯ ಸಂಗ್ರಹದ ಪ್ರಕಾರ, ನೋಂದಾಯಿತ ಮತದಾರರಲ್ಲಿ 49 ಪ್ರತಿಶತದಷ್ಟು ಬೆಂಬಲದೊಂದಿಗೆ ಬಿಡೆನ್ ಮುಂಚೂಣಿಯಲ್ಲಿದ್ದರೆ, ಟ್ರಂಪ್‌ಗೆ 45 ಪ್ರತಿಶತದಷ್ಟು ಬೆಂಬಲವಿದೆ ಎಂದು ದಿ ಹಿಲ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಕ್ಟೋಬರ್ 5ರ ರಾಯಿಟರ್ಸ್ / ಇಪ್ಸೊಸ್ ಅಭಿಪ್ರಾಯ ಸಂಗ್ರಹದಲ್ಲಿ, ನೋಂದಾಯಿತ ಮತದಾರರಲ್ಲಿ 50 ಪ್ರತಿಶತದಷ್ಟು ಬಿಡನ್ ಅವರನ್ನು ಬೆಂಬಲಿಸಿದರೆ, ಟ್ರಂಪ್‌ಗೆ 45 ಪ್ರತಿಶತದಷ್ಟು ಜನ ಬೆಂಬಲಿಸಿದ್ದಾರೆ.
ಸೆಪ್ಟೆಂಬರ್ ಮಧ್ಯದಲ್ಲಿ, ಶೇಕಡಾ 49ರಷ್ಟು ಜನ ಬಿಡೆನ್ ಬೆಂಬಲಿಸಿದರೆ, 46 ಪ್ರತಿಶತದಷ್ಟು ಜನರು ಟ್ರಂಪ್ ಬೆಂಬಲಿಸಿದ್ದಾರೆ.
ನವೆಂಬರ್ 3ರ ಚುನಾವಣೆಗೆ ಕೇವಲ 10 ದಿನಗಳ ಮೊದಲು, ಸುಮಾರು 53.5 ಮಿಲಿಯನ್ ಅಮೆರಿಕನ್ ನಾಗರಿಕರು ಈಗಾಗಲೇ ಆರಂಭಿಕ ಮತಗಳನ್ನು ಚಲಾಯಿಸಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆ, ಹೆಚ್ಚಿನ ಅಮೆರಿಕನ್ನರು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ ಮೂಲಕ ಮತ ಚಲಾಯಿಸಲು ಆಯ್ಕೆ ಮಾಡುತ್ತಿದ್ದಾರೆ.