ವಾಷಿಂಗ್ಟನ್:ಅಮೆರಿಕದ ಮಿನ್ನಿಯಾಪೊಲೀಸ್ ನಗರದಲ್ಲಿ ಕಪ್ಪು ವರ್ಣೀಯ ಹಾಗೂ ಅಮೆರಿಕ - ಆಫ್ರಿಕನ್ ಪ್ರಜೆಯಾಗಿರುವ ಜಾರ್ಜ್ ಫ್ಲಾಯ್ಡ್ ಸಾವಿಗೆ ದೇಶದಾದ್ಯಂತ ಆರಂಭವಾಗಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಈಗಾಗಲೇ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಮೆರಿಕ ಸರ್ಕಾರ ಭಾಗಶಃ ವಿಫಲವಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಭಟನಾಕಾರರಿಗೆ ಎಚ್ಚರಿಕೆಯೊಂದನ್ನು ರವಾನಿಸಿದ್ದಾರೆ. ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ನಿಗ್ರಹಿಸಲು ರಾಜ್ಯಗಳು ವಿಫಲವಾದರೆ, ದೇಶದ ಮಿಲಿಟರಿ ಪಡೆಯನ್ನು ನಿಯೋಜಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ಕಳೆದ ಸೋಮವಾರ ರಾಷ್ಟ್ರವನ್ನುದ್ದೇಶಿಸಿ ತೀರಾ ಆತುರದಿಂದ ಕರೆದ ಭಾಷಣದಲ್ಲಿ ಟ್ರಂಪ್, ಗಲಭೆ, ವಿಧ್ವಂಸಕತೆ, ಆಕ್ರಮಣಗಳು ಮತ್ತು ಆಸ್ತಿಯ ನಾಶ ತಡೆಯಲು ಸಾವಿರಾರು ಶಸ್ತ್ರಸಜ್ಜಿತ ಸೈನಿಕರು, ಮಿಲಿಟರಿ ಸಿಬ್ಬಂದಿ ಮತ್ತು ಕಾನೂನು ಜಾರಿ ಅಧಿಕಾರಿಗಳನ್ನು ರವಾನಿಸುತ್ತಿರುವುದಾಗಿ ಘೋಷಿಸಿದ್ದಾರೆ.
ಮಿನ್ನಿಯಾಪೊಲೀಸ್ನಲ್ಲಿ ಕಳೆದ ವಾರ ಕಪ್ಪು ವರ್ಣೀಯ 46 ವರ್ಷದ ಜಾರ್ಜ್ ಫ್ಲಾಯ್ಡ್ನ ಕುತ್ತಿಗೆಯನ್ನು ಶ್ವೇತ ವರ್ಣೀಯ ಪೊಲೀಸ್ ಅಧಿಕಾರಿಯೊಬ್ಬ ಮೊಣಕಾಲಿನಿಂದ ಒತ್ತಿ ಆತನನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಕಳೆದ ಒಂದು ವಾರದಿಂದ ದೇಶದಲ್ಲಿ ಎದ್ದಿರುವ ಜನಾಂಗೀಯ ಹೋರಾಟದಿಂದ ಯುಎಸ್ನಲ್ಲಿ ಶತಕೋಟಿ ಡಾಲರ್ ಮೌಲ್ಯದ ಆಸ್ತಿಗಳು ನಾಶವಾಗಿವೆ. ಗಲಭೆಕೋರರು ವಾಣಿಜ್ಯ ಕೇಂದ್ರಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಹಾನಿ ಮಾಡಿದ್ದಾರೆ. ಅಂಗಡಿ-ಮುಂಗಟ್ಟುಗಳು ಹಾಗೂ ಮಾಲ್ಗಳಲ್ಲಿ ಲೂಟಿ ಮಾಡಿದ್ದಾರೆ.
ಬೀದಿಗಳಲ್ಲಿ ಪ್ರತಿಭಟನಾಕಾರರನ್ನು ನಿಗ್ರಹಿಸುವ ಪ್ರಾಬಲ್ಯ ಹೊಂದಿರುವ ಸಾಕಷ್ಟು ಸಂಖ್ಯೆಯ ನ್ಯಾಷನಲ್ ಗಾರ್ಡ್ಗಳನ್ನು ನಿಯೋಜಿಸಲು ನಾನು ಪ್ರತಿ ರಾಜ್ಯಪಾಲರಿಗೆ ಬಲವಾಗಿ ಶಿಫಾರಸು ಮಾಡಿದ್ದೇನೆ. ಹಿಂಸಾಚಾರವನ್ನು ತಗ್ಗಿಸುವವರೆಗೆ ಆಯಾ ನಗರಗಳ ಮೇಯರ್ಗಳು ಹಾಗೂ ರಾಜ್ಯಪಾಲರು ಸೂಕ್ತ ಕಾನೂನು ಜಾರಿಗೊಳಿಸಬೇಕು ಎಂದು ಟ್ರಂಪ್ ಸೂಚಿಸಿದ್ದಾರೆ.
ಒಂದು ವೇಳೆ ಒಂದು ನಗರ ಅಥವಾ ರಾಜ್ಯವು, ತನ್ನ ನಿವಾಸಿಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲವಾದರೆ, ನಾನು ಯುಎಸ್ ಮಿಲಿಟರಿಯನ್ನು ನಿಯೋಜಿಸುತ್ತೇನೆ ಮತ್ತು ಅಲ್ಲಿನ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುತ್ತೇನೆ ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಇವು ಶಾಂತಿಯುತ ಪ್ರತಿಭಟನೆಯಲ್ಲ. ಇವು ದೇಶೀಯ ಭಯೋತ್ಪಾದನೆಯ ಕೃತ್ಯಗಳು. ಮುಗ್ಧ ಜೀವಗಳ ಬಲಿ ಮತ್ತು ಮುಗ್ಧರ ರಕ್ತ ಚೆಲ್ಲುವುದು ಮಾನವೀಯತೆಗೆ ಎಸಗುವ ಅಪರಾಧ ಮತ್ತು ದೇವರ ವಿರುದ್ಧದ ಅಪರಾಧ ಎಂದು ಟ್ರಂಪ್ ಹೇಳಿದ್ದಾರೆ.