ವಾಷಿಂಗ್ಟನ್:ಕಣ್ಣಿಗೆ ಕಾಣದ ಶತ್ರು ದಾಳಿಗೆ ನಲುಗಿರುವ ಅಮೆರಿಕ, ತನ್ನ ರಕ್ಷಣೆಗೆ ಸರ್ವ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿನಕ್ಕೊಂದು ಕಠಿಣ ನಿರ್ಧಾರದ ಮೊರೆ ಹೋಗುತ್ತಿದ್ದಾರೆ.
ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು ಬರಬಾರದು ಎಂದು ತಾತ್ಕಾಲಿಕವಾಗಿ ವಲಸಿಗರಿಗೆ ನಿರ್ಬಂಧ ಹೇರುವ ಭಾಗವಾಗಿ ಮುಂದಿನ 60 ದಿನಗಳ ಕಾಲ ಹೊಸದಾಗಿ ಗ್ರೀನ್ ಕಾರ್ಡ್ ಅಥವಾ ಕಾನೂನು ಬದ್ಧವಾಗಿ ಶಾಶ್ವತ ರೆಸಿಡೆನ್ಸಿ ನೀಡುವುದನ್ನು ನಿಲ್ಲಿಸುವುದಾಗಿ ಟ್ರಂಪ್ ಹೇಳಿದ್ದಾರೆ.
ಬುಧವಾರ ಈ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ ಬಳಿಕ ಶ್ವೇತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಆದೇಶವು ಶಾಶ್ವತ ನಿವಾಸ ಬಯಸುವವರಿಗೆ ಮಾತ್ರ ಅನ್ವಯವಾಗುತ್ತದೆ. ತಾತ್ಕಾಲಿಕವಾಗಿ ದೇಶ ಪ್ರವೇಶಿಸುವವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಮುಖ್ಯವಾಗಿ ದೇಶಿ ತಂತ್ರಜ್ಞಾನ ವೃತ್ತಿಪರರಿಗೆ, ಹೆಚ್-1ಬಿ ವಲಸೆ ರಹಿತ ಕೆಲಸದ ಮೇರೆಗೆ ಮತ್ತು ಕೃಷಿ ಉದ್ದೇಶಗಳಿಗಾಗಿ ಆಗಮಿಸುವ ಕಾಲೋಚಿತ ವಲಸೆ ಕಾರ್ಮಿಕರ ಮೇಲೂ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ, ಗ್ರೀನ್ ಕಾರ್ಡ್ ಪಡೆಯಲು ಕಾತುರದಿಂದ ಕಾಯುತ್ತಿದ್ದ ಹೆಚ್ಚಿನ ಸಂಖ್ಯೆ ಮತ್ತು ಸಾವಿರಾರು ಭಾರತೀಯ ಅಮೆರಿಕನ್ನರ ಮೇಲೆ ಪರಿಣಾಮ ಬೀರುತ್ತದೆ. ಈ ಪ್ರಕ್ರಿಯೆ ಮನ್ನಷ್ಟು ವಿಳಂಬವಾಗುವ ಸಾಧ್ಯತೆಯೂ ಇದೆ.
ಅಮೆರಿಕನ್ನರ ಉದ್ಯೋಗ ಭದ್ರತೆಗೆ ಯಾವುದೇ ಕುಂದು ತರದಂತೆ ನೋಡಿಕೊಳ್ಳುವುದೇ ನಮ್ಮ ಮೊದಲ ಆದ್ಯತೆ. ಗ್ರೀನ್ ಕಾರ್ಡ್ ವಿತರಣೆ ನಿರ್ಬಂಧ 60 ದಿನಗಳ ಕಾಲ ಜಾರಿಯಲ್ಲಿ ಇರಲಿದೆ. ನಂತರ ಆರ್ಥಿಕ ಪರಿಸ್ಥಿತಿಗಳ ಆಧಾರದಲ್ಲಿ ಪ್ರಸ್ತುತದ ನಿರ್ಧಾರವನ್ನು ವಿಸ್ತರಿಸುವ ಮತ್ತು ಮಾರ್ಪಾಡುಗೊಳಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದೇನೆ ಎಂದು ತಿಳಿಸಿದರು.
ಗ್ರೀನ್ ಕಾರ್ಡ್ ಹೊಂದಿದ ವ್ಯಕ್ತಿ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವ ಹಾಗೂ ವೃತ್ತಿ (ಕೆಲಸ) ಮಾಡುವ ಅವಕಾಶವನ್ನು ಪಡೆಯುತ್ತಾನೆ. ಇತ್ತೀಚೆಗೆ ಅಮೆರಿಕ ಪ್ರಜೆಗಳ ಉದ್ಯೋಗ ಕಾಪಾಡುವ ದೃಷ್ಟಿಯನ್ನಿಟ್ಟುಕೊಂಡು ಅಮೆರಿಕಕ್ಕೆ ವಲಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಟ್ರಂಪ್ ಆದೇಶ ಹೊರಡಿಸಿದ್ದರು. ಕೊರೊನಾ ಕಾಟದಿಂದಾಗಿ ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗುವ ಸಾಧ್ಯತೆಯೂ ಇದೆ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ.
ಸದ್ಯ ಅಸ್ತಿತ್ವದಲ್ಲಿ ಇರುವ ಕಾನೂನಿನ ಪ್ರಕಾರ, ಅಮೆರಿಕ ಪ್ರತಿವರ್ಷ ಗರಿಷ್ಠ 1,40,000 ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳನ್ನು ವಿತರಿಸಲಿದೆ. ಅದರಂತೆ, 2019ರ ಆರ್ಥಿಕ ವರ್ಷದಲ್ಲಿ ವರ್ಗ 1 (ಇಬಿ 1) 9,008 (ಭಾರತೀಯ ಪ್ರಜೆಗಳು), ವರ್ಗ 2 (ಇಬಿ 2) 2,908, ಮತ್ತು (ಇಬಿ 3) ವರ್ಗ 3 5,083 ಮಂದಿ ಭಾರತೀಯ ಪ್ರಜೆಗಳು ಗ್ರೀನ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಇಬಿ 1ರಿಂದ 3ರವರೆಗೂ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳ ವಿವಿಧ ವರ್ಗಗಳು.
ಮಹಾಮಾರಿ ಕೊರೊನಾಗೆ ತಲ್ಲಣಗೊಂಡಿರುವ ಅಮೆರಿಕದಲ್ಲಿ ಕಳೆದ 24ಗಂಟೆಗಳಲ್ಲಿ 40,000 ಪ್ರಕರಣಗಳು ಬೆಳಕಿಗೆ ಬಂದಿದ್ದು, 2,700ಕ್ಕೂ ಹೆಚ್ಚು ಸಾವು ವರದಿಯಾಗಿವೆ. ಈ ಮೂಲಕ ದಾಖಲಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 8 ಲಕ್ಷ ದಾಟಿದ್ದರೆ, ಸಾವಿನ ಸಂಖ್ಯೆ 45,297 ಮುಟ್ಟಿದೆ.