ವಾಷಿಂಗ್ಟನ್:ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದ್ದು, ಶೀಘ್ರದಲ್ಲೇ ಕೆಲಸಕ್ಕೆ ವಾಪಸ್ ಆಗುತ್ತೇನೆ ಎಂದು ಕೋವಿಡ್-19 ಸೋಂಕಿಗೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊರೊನಾ ದೃಢಪಟ್ಟ ಹಿನ್ನೆಲೆ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಯಲ್ಲಿ ಟ್ರಂಪ್ ದಂಪತಿ ಕೋವಿಡ್ -19 ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಪ್ರಾಯೋಗಿಕ ಕೋವಿಡ್ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಈ ಕುರಿತಾಗಿ ಡೊನಾಲ್ಡ್ ಟ್ರಂಪ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದಿದ್ದಾರೆ. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಆದಷ್ಟು ಶೀಘ್ರದಲ್ಲೇ ಕೆಲಸಕ್ಕೆ ವಾಪಸ್ ಆಗುತ್ತೇನೆ ಮತ್ತು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದಿದ್ದಾರೆ. ಪತ್ನಿ ಮೆಲಾನಿಯಾ ಆರೋಗ್ಯ ಕೂಡಾ ಚೇತರಿಸಿಕೊಳ್ಳುತ್ತಿದ್ದು, ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ವಿಶ್ವದ ಎಲ್ಲಾ ಗಣ್ಯರಿಗೂ ಟ್ರಂಪ್ ಧನ್ಯವಾದ ತಿಳಿಸಿದ್ದಾರೆ.