ವಾಷಿಂಗ್ಟನ್:ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವುದು ನಾನೇ ಎಂದು ಮತ್ತೆ ಹೇಳಿಕೊಂಡಿರುವ ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ ಎಣಿಕೆ ವಂಚನೆ ಬಗ್ಗೆ ಸಾಬೀತಾಗದ ಆರೋಪಗಳ ಕುರಿತು ತನಿಖೆ ನಡೆಸಲು ಆಗ್ರಹಿಸಿದ್ದಾರೆ.
"ಇದು ನಾವು ಸುಲಭವಾಗಿ ಗೆದ್ದ ಚುನಾವಣೆಯಾಗಿದೆ, ಸಾಕಷ್ಟು ಮತಗಳ ಅಂತರದಿಂದಲೇ ಗೆದ್ದಿದ್ದೇವೆ" ಎಂದು ಬುಧವಾರ ಪೆನ್ಸಿಲ್ವೇನಿಯಾಯಲ್ಲಿ ರಿಪಬ್ಲಿಕನ್ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಜೋಕ್ಗಳಿಗೆ ಗುಡ್ಬೈ ಹೇಳಿದ ಟ್ರಂಪ್ ; ಧನ್ಯವಾದ ಸಮರ್ಪಣಾ ಕಾರ್ಯಕ್ರಮದಲ್ಲಿ ಗಂಭೀರತೆ ಮೆರೆದ ಪ್ರೆಸಿಡೆಂಟ್
ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ವಿರುದ್ಧ ಸುಮಾರು 1,50,000 ಮತಗಳ ಅಂತರದಿಂದ ಟ್ರಂಪ್ ಸೋತಿದ್ದರು. ರಿಪಬ್ಲಿಕನ್ ಭದ್ರಕೋಟೆಯಲ್ಲೇ ಟ್ರಂಪ್ ಹಿನ್ನಡೆ ಕಂಡಿದ್ದರು. ಜೋ ಬೈಡನ್ ಅವರು ಚುನಾಯಿತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ, ಫಲಿತಾಂಶ ಬಂದಾಗಿನಿಂದ ಇಂದಿನವರೆಗೂ ಟ್ರಂಪ್ ತಮ್ಮ ಸೋಲನ್ನು, ಬೈಡನ್ ಗೆಲುವು ಒಪ್ಪಲು ನಿರಾಕರಿಸುತ್ತಲೇ ಬಂದಿದ್ದಾರೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸುತ್ತ ಬಂದಿದ್ದಾರೆ.
ಮತ್ತೊಮ್ಮೆ ಚುನಾವಣೆ ನಡೆಸಬೇಕಾಗಿದೆ. ಮತ ಎಣಿಕೆ ವಂಚನೆ ಬಗ್ಗೆ ಸಾಬೀತಾಗದ ಆರೋಪಗಳ ಕುರಿತು ತನಿಖೆ ನಡೆಸಬೇಕಾಗಿದೆ ಎಂದು ಪೆನ್ಸಿಲ್ವೇನಿಯಾಯಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.