ವಾಷಿಂಗ್ಟನ್ : ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿಎಲ್ಲಾ ಅಮೆರಿನ್ನರಿಗೂ ಕೊರೊನಾ ವೈರಸ್ ವ್ಯಾಕ್ಸಿನ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೊಸ ಭರವಸೆಯನ್ನು ನೀಡಿದ್ದಾರೆ.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳಲ್ಲಿ ಗೆಲ್ಲಲು ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷಗಳು ಸಾಕಷ್ಟು ಕಸರತ್ತು ನಡೆಸುತ್ತಿದ್ದು, ರಿಪಬ್ಲಿಕನ್ ಪಕ್ಷದಿಂದ ಈ ರೀತಿಯ ಭರವಸೆ ಹೊರಬಿದ್ದಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ವಿಸ್ಕಾಸಿನ್ ರಾಜ್ಯದ ಜನೆಸ್ವಿಲ್ಲೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು "ನಾವು ವ್ಯಾಕ್ಸಿನ್ ತಯಾರಿಸುತ್ತಿದ್ದು, ಎಲ್ಲರಿಗೂ ಉಚಿತವಾಗಿ ಒದಗಿಸುತ್ತೇವೆ, ನಮ್ಮಲ್ಲಿರುವ ವ್ಯಾಕ್ಸಿನ್ ಉತ್ತಮವಾಗಿರುತ್ತದೆ'' ಎಂದ ಅವರು '' ಈ ಬಾರಿಯ ಚುನಾವಣೆ ಟ್ರಂಪ್ನ ಚೇತರಿಕೆ ಹಾಗೂ ಬಿಡೆನ್ನ ಖಿನ್ನತೆಯ ನಡುವಿನ ಆಯ್ಕೆ'' ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮೊದಲು ಮಿಚಿಗನ್ ರಾಜ್ಯದ ಮಸ್ಕೆಗಾನ್‌ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಟ್ರಂಪ್, ನವೆಂಬರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಗೆಲುವು ಸಾಧಿಸಿದರೆ ಅದು ಮಿಚಿಗನ್ನಲ್ಲಿ ಕೊರೊನಾ ವೈರಸ್ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಬಿಡೆನ್ ಲಸಿಕೆಯನ್ನು ವಿಳಂಬಗೊಳಿಸುತ್ತಾರೆ ಮತ್ತು ಸಾಂಕ್ರಾಮಿಕ ರೋಗವನ್ನು ಹೆಚ್ಚಿಸುತ್ತಾರೆ'' ಎಂದು ಹೇಳಿದ್ದಾರೆ.
ಟ್ರಂಪ್ ಈ ತಿಂಗಳ ಆರಂಭದಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಅವರಿಗೆ ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಮೊದಲ ಬಾರಿಗೆ ಫ್ಲೋರಿಡಾದ ಸ್ಯಾನ್ಫೋರ್ಡ್ನಲ್ಲಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ಗೆ ಅಕ್ಟೋಬರ್ 2 ರಂದು ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು. ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರದಿಂದ ಟ್ರಂಪ್ ಡಿಸ್ಚಾರ್ಜ್ ಆಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.