ನ್ಯೂಯಾರ್ಕ್:ಅತ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ವೈರಿ ರಾಷ್ಟ್ರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕದಲ್ಲಿದ್ದಾರೆ. ಇತ್ತ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಮಧ್ಯಸ್ಥಿಕೆ ವಿಷಯ ಪ್ರಸ್ತಾಪಿಸಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯಸಭೆ ಉದ್ದೇಶಿಸಿ ಮಾತನಾಡುವ ಒಂದು ನಿಮಿಷಕ್ಕೆ ಮುನ್ನ ಭಾರತ - ಪಾಕಿಸ್ತಾನ ಮಾತುಕತೆ ಬಗ್ಗೆ ಪ್ರಸ್ತಾಪಿಸಿದ ಡೊನಾಲ್ಡ್ ಟ್ರಂಪ್, ಎರಡೂ ರಾಷ್ಟ್ರಗಳು ಬಯಸಿದರೆ ಮಧ್ಯಸ್ಥಿಕೆಗೆ ಸಿದ್ಧ ಎಂದು ಮತ್ತೊಮ್ಮೆ ಘೋಷಿಸಿದ್ದಾರೆ.
ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಮಾತನಾಡಲು ತಾವು ಖಂಡಿತವಾಗಿಯೂ ಸಿದ್ಧನಾಗಿದ್ದೇನೆ. ಒಂದು ನಿರ್ದಿಷ್ಟ ಮಾತುಕತೆಗೆ ನನ್ನ ಸಹಾಯಬೇಕಾಗುತ್ತದೆ ಎಂದುಕೊಂಡಿದ್ದೇನೆ. ಆದರೆ, ಎರಡೂ ಕಡೆಯವರು ಒಪ್ಪಿದರೆ ಮಾತ್ರ ಇದು ಸಾಧ್ಯ. ಇನ್ನು ಅವರಿಬ್ಬರೂ ಭಿನ್ನ ಅಭಿಪ್ರಾಯ ಹಾಗೂ ಧೋರಣೆ ಹೊಂದಿದ್ದಾರೆ. ಇದೇ ಈಗಿರುವ ಸಮಸ್ಯೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ರಂಪ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ನಾನು ಸಂಧಾನಕ್ಕೆ ಸಿದ್ಧನಿದ್ದೇನೆ. ಆದರೆ ಅದಕ್ಕೆ ಎರಡೂ ರಾಷ್ಟ್ರಗಳು ಒಪ್ಪಬೇಕು ಎಂದಿದ್ದರು.
ಮಧ್ಯಸ್ಥಿಕೆ ಮಾಡಬೇಕಾದರೆ ಒಬ್ಬರನ್ನು ಬಿಟ್ಟರೂ ಮಾತುಕತೆ ಯಶಸ್ವಿಯಾಗುವುದು ಅಸಾಧ್ಯ ಎಂಬ ಅಭಿಪ್ರಾಯವನ್ನ ಟ್ರಂಪ್ ವ್ಯಕ್ತಪಡಿಸಿದ್ದಾರೆ.