ವಾಷಿಂಗ್ಟನ್:ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 70ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಶುಭಾಶಯ ಕೋರಿದ್ದು, ಅವರನ್ನು "ಶ್ರೇಷ್ಠ ನಾಯಕ ಮತ್ತು ನಿಷ್ಠಾವಂತ ಸ್ನೇಹಿತ" ಎಂದು ಹೊಗಳಿದ್ದಾರೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ 70ನೇ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ಒಬ್ಬ ಮಹಾನ್ ನಾಯಕ ಮತ್ತು ನಿಷ್ಠಾವಂತ ಗೆಳೆಯನಿಗೆ ಜನ್ಮದಿನದ ಶುಭಾಶಯಗಳು ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಜೊತೆಗಿರುವ ಛಾಯಾಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಅಹಮದಾಬಾದ್‌ನ ಮೊಟೆರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತದ ಮೊದಲ ಭೇಟಿಯಲ್ಲಿ ಅಮೆರಿಕಾ ಅಧ್ಯಕ್ಷರನ್ನು ಸ್ವಾಗತಿಸಲು ನೆರೆದಿದ್ದ 125,000 ಜನಸಮೂಹದ ಮುಂದೆ ಉಭಯ ನಾಯಕರು ಕೈ ಎತ್ತಿ ಹಿಡಿದಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು "ಹೊಸ ಇತಿಹಾಸ"ವನ್ನು ರಚಿಸಲಾಗುತ್ತಿದೆ ಎಂದು ಹೇಳಿದ್ದರು.
ಮೋದಿ ಮತ್ತು ಟ್ರಂಪ್ ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಅವರು ಆಗಾಗ್ಗೆ ದೂರವಾಣಿಯಲ್ಲಿ ಮಾತನಾಡುತ್ತಾರೆ ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಉಭಯ ದೇಶಗಳು ಪರಸ್ಪರ ಅಭೂತಪೂರ್ವ ಸಹಕಾರ ನೀಡಿವೆ.