ವಾಷಿಂಗ್ಟನ್:ಅಧಿಕಾರ ದುರ್ಬಳಕೆ ಹಾಗೂ ಕಾಂಗ್ರೆಸ್ನ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡಿರುವ ಆರೋಪದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮಹಾಭಿಯೋಗ ಮೂರು ದಿನಗಳ ವಿಚಾರಣೆ ಮುಕ್ತಾಯವಾಗಿದೆ.
ಮುರು ದಿನಗಳ ಕಾಲ ಟ್ರಂಪ್ ವಿರುದ್ಧ ಸೆನೆಟ್ನಲ್ಲಿ ಆರೋಪ ಮಾಡಿದ ದೋಷಾರೋಪಣ ವ್ಯವಸ್ಥಾಪಕರು, ಟ್ರಂಪ್ಗೆ ಅಧಿಕಾರದಲ್ಲಿರಲು ಅವಕಾಶ ನೀಡುವುದರಿಂದ ದೇಶದ ಭದ್ರತೆಗೆ ಧಕ್ಕೆ ಉಂಟಾಗುತ್ತದೆ ಎಂದು ತಮ್ಮ ವಾದ ಮಂಡಿಸಿದ್ದಾರೆ.
ಹೌಸ್ ಇಂಟೆಲಿಜೆನ್ಸ್ ಸಮಿತಿಯ ಅಧ್ಯಕ್ಷರಾದ ಕ್ಯಾಲಿಫೋರ್ನಿಯಾದ ಪ್ರತಿನಿಧಿ ಆಡಂ ಬಿ. ಸ್ಕಿಫ್ ಅವರು ಟ್ರಂಪ್, ಸಂವಿಧಾನಕ್ಕೆ ನಿರಂತರ ಬೆದರಿಕೆ ಒಡ್ಡಲಿದ್ದಾರೆ ಎಂದು ಬಿಂಬಿಸಿದರು. ಆರ್ಟಿಕಲ್ 2ರ ಅಡಿಯಲ್ಲಿ ನಾನು ಏನು ಬೇಕಾದರೂ ಮಾಡಬಹುದು, ಸರ್ಕಾರದ ಒಂದು ಇಲಾಖೆಯಂತೆ ನನ್ನನ್ನ ಪರಿಗಣಿಸಬೇಕಾಗಿಲ್ಲ ಎಂದು ಅಮೆರಿಕ ಅಧ್ಯಕ್ಷರು ಹೇಳಬಹುದು. ಇದನ್ನ ನಾವು ಒಪ್ಪಿಕೊಂಡರೆ ಅದು ಈ ದೇಶಕ್ಕೆ ಕೊನೆಯಿಲ್ಲದ ಗಾಯವಾಗಿ ಉಳಿಯುತ್ತದೆ ಎಂದಿದ್ದಾರೆ.
ಇನ್ನೊಬ್ಬ ದೋಷಾರೋಪಣೆ ವ್ಯವಸ್ಥಾಪಕ, ಕೊಲೊರಾಡೋದ ಪ್ರತಿನಿಧಿ ಜೇಸನ್ ಕ್ರೌ, ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮಕ್ಕೆ ಅಪಾಯವನ್ನುಂಟು ಮಾಡುವ ಭವಿಷ್ಯದ ಅಧ್ಯಕ್ಷೀಯ ದುಷ್ಕೃತ್ಯದಿಂದ ರಕ್ಷಿಸುವುದು ನೆಟರ್ಗಳ ಗುರಿಯಾಗಿದೆ. ಕಾಂಗ್ರೆಸ್ನ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡುವುದು ಸಾಂವಿಧಾನಿಕ ಅಪರಾಧ ಎಂದಿದ್ದಾರೆ.
ಈ ಮಧ್ಯೆ ಟ್ವಿಟ್ ಮಾಡಿರುವ ಡೊನಾಲ್ಡ್ ಟ್ರಂಪ್, ದೋಷಾರೋಪಣೆ ಎಂಬ ವಂಚನೆ 2020ರ ಚುನಾವಣೆಗೆ ಹಸ್ತಕ್ಷೇಪ ಮಾಡುತ್ತಿದೆ ಎಂದಿದ್ದಾರೆ. '2020ರ ಚುನಾವಣೆಗೆ ಹಸ್ತಕ್ಷೇಪ ದೋಷಾರೋಪಣೆಯ ಹಿಂದಿನ ಉದ್ದೇಶವಾಗಿತ್ತು. ನಾನು ಏನೂ ತಪ್ಪು ಮಾಡಿಲ್ಲ ಎಂಬುದು ಅವರಿಗೂ ತಿಳಿದಿದೆ' ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.