ವಾಷಿಂಗ್ಟನ್: ಹೆಚ್-1ಬಿ ಸೇರಿದಂತೆ ಇತರ ಉದ್ಯೋಗ ವೀಸಾಗಳನ್ನು ರದ್ದುಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೋವಿಡ್-19 ಬಿಕ್ಕಟ್ಟಿನಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ಸೃಷ್ಟಿಯಾಗುವ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಐಟಿ ಉದ್ಯೋಗಿಗಳಿಗೆ ಹೆಚ್ಚು ಬೇಡಿಕೆಯಿರುವ ಹೆಚ್-1ಬಿ ಸೇರಿದಂತೆ ಹಲವಾರು ಉದ್ಯೋಗ ವೀಸಾಗಳನ್ನು ರದ್ದುಗೊಳಿಸುವ ಬಗ್ಗೆ ಟ್ರಂಪ್ ಚಿಂತನೆ ನಡೆಸಿದ್ದಾರೆ. ಅಕ್ಟೋಬರ್ 1 ರಿಂದ ದೇಶದಲ್ಲಿ ಪ್ರಾರಂಭವಾಗುವ ಹೊಸ ಹಣಕಾಸು ವರ್ಷದಿಂದ ಈ ನಿಯಮ ಜಾರಿಗೆ ಬರಬಹುದು ಎಂದು ವರದಿಯಾಗಿದೆ.
ಇದು ಹೊರದೇಶಗಳಿಂದ ಹೊಸದಾಗಿ ಕೆಲಸಕ್ಕೆ ಬರುವವರಿಗೆ ಅನ್ವಯವಾಗುತ್ತದೆ. ಈಗಾಗಲೇ ಅಮೆರಿಕದಲ್ಲಿ ಹೆಚ್-1ಬಿ ವೀಸಾ ಹೊಂದಿರುವವರು ನೆಲೆಸಿದ್ದರೆ ಅಂತವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆಯಿದೆ. ವೀಸಾ ರದ್ದತಿ ವಿಚಾರ ಪ್ರಸ್ತಾಪವಾಗಿದೆ, ಆದರೆ ಸರ್ಕಾರ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ವೈಟ್ ಹೌಸ್ ತಿಳಿಸಿದೆ.
ಕೊರೊನಾ ಪರಿಸ್ಥಿತಿಯಿಂದಾಗಿ ಹೆಚ್ -1ಬಿ ವೀಸಾ ಹೊಂದಿದ್ದ ಅನೇಕ ಭಾರತ ಮೂಲದ ಪ್ರಜೆಗಳು ಕೆಲಸ ತೊರೆದು ಸ್ವದೇಶಕ್ಕೆ ಮರಳಿದ್ದಾರೆ. ಟ್ರಂಪ್ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದೇ ಆದಲ್ಲಿ ಇದು ಭಾರತೀಯ ಐಟಿ ಉದ್ಯೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.