ವಾಷಿಂಗ್ಟನ್ (ಅಮೆರಿಕ): ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎಸ್ ಹೌಸ್ನಿಂದ 2ನೇ ಬಾರಿಗೆ ದೋಷಾರೋಪಣೆಗೆ ಒಳಗಾದ ಎರಡನೇ ಅಧ್ಯಕ್ಷರಾದ ಕೆಲ ಗಂಟೆಗಳ ಸಮಯದಲ್ಲೇ, ಕ್ಯಾಪಿಟಲ್‌ನಲ್ಲಿ ಅವರ ಬೆಂಬಲಿಗರು ನಡೆಸಿದ ಹಿಂಸಾಚಾರವನ್ನು ಖಂಡಿಸುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಇಂತಹ ಘಟನೆಯ ಪುನರಾವರ್ತನೆ ತಪ್ಪಿಸಲು ಕರೆ ನೀಡಿದ್ದಾರೆ.
"ಹಿಂಸಾಚಾರವು ನಾನು ನಂಬುವುದಕ್ಕೆ ವಿರುದ್ಧವಾಗಿದೆ ಮತ್ತು ನಮ್ಮ ಆಂದೋಲನಕ್ಕೂ ವಿರುದ್ಧವಾಗಿದೆ" ಎಂದು ಟ್ರಂಪ್ ಅಮೆರಿಕನ್ನರನ್ನು ಉದ್ದೇಶಿಸಿ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
"ನನ್ನ ನಿಜವಾದ ಬೆಂಬಲಿಗರು ಎಂದಿಗೂ ರಾಜಕೀಯ ಹಿಂಸಾಚಾರ ಅನುಮೋದಿಸಲು ಸಾಧ್ಯವಿಲ್ಲ. ನನ್ನ ನಿಜವಾದ ಬೆಂಬಲಿಗರು ಕಾನೂನು ಜಾರಿಗೊಳಿಸುವಿಕೆಯನ್ನು ಅಥವಾ ನಮ್ಮ ಅಮೆರಿಕನ್ ಧ್ವಜವನ್ನು ಅಗೌರವಗೊಳಿಸಲಾರರು. ನನ್ನ ನಿಜವಾದ ಬೆಂಬಲಿಗರು ಸಹವರ್ತಿ ಅಮೆರಿಕನ್ನರನ್ನು ಬೆದರಿಸಲು ಅಥವಾ ಕಿರುಕುಳ ನೀಡಲು ಸಾಧ್ಯವಿಲ್ಲ. ಇವುಗಳಲ್ಲಿ ಯಾವುದಾದರೂ ಒಂದು ಕೃತ್ಯ ಮಾಡಿದ್ದರೆ, ನೀವು ನಮ್ಮ ಆಂದೋಲನವನ್ನು ಬೆಂಲಿಸುತ್ತಿಲ್ಲ, ಅದರ ಮೇಲೆ ದಾಳಿ ಮಾಡುತ್ತಿದ್ದೀರಾ. ನಮ್ಮ ದೇಶದ ಮೇಳೆ ದಾಳಿ ಮಾಡುತ್ತಿದ್ದೀರ, ನಾನು ಇದನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಕ್ಯಾಪಿಟಲ್ ಮೇಲಿನ ಹಿಂಸಾಚಾರದಲ್ಲಿ ಭಾಗವಹಿಸಿದವರನ್ನು ಕಾನೂನಿನ ಅಡಿ ತರಲಾಗುವುದು ಎಂದು ಅಧ್ಯಕ್ಷರು ಹೇಳಿದ್ದಾರೆ. "ಯಾವುದೇ ಕ್ಷಮೆ ಇಲ್ಲ, ಅಮೆರಿಕವು ಕಾನೂನುಗಳ ಮೇಲೆ ನಡೆಯುವ ರಾಷ್ಟ್ರವಾಗಿದೆ. ಕಳೆದ ವಾರ ದಾಳಿಯಲ್ಲಿ ತೊಡಗಿದ್ದವರನ್ನು ಕಾನೂನಿನ ಅಡಿ ತರಲಾಗುವುದು" ಎಂದು ಅವರು ಹೇಳಿದ್ದಾರೆ.
ವಿಡಿಯೋದಲ್ಲಿ ಟ್ರಂಪ್ ಅವರ ದೋಷಾರೋಪಣೆಯ ಬಗ್ಗೆ ಏನನ್ನೂ ಮಾತನಾಡದಿದ್ದರೂ, ಸಾಮಾಜಿಕ ಮಾಧ್ಯಮಗಳು ತಮ್ಮ ಮೇಲೆ ವಿಧಿಸಿರುವ ನಿಷೇಧವನ್ನು ಅವರು ಉಲ್ಲೇಖಿಸಿದ್ದು, ವಾಕ್ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.