ವಾಷಿಂಗ್ಟನ್: ಕೊರೊನಾದಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಅಮೆರಿಕಾದಲ್ಲೂ ಕೇಸ್ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಆತಂಕದ ಪರಿಸ್ಥಿತಿಯ ನಡುವೆಯೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕನ್ನರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕೋವಿಡ್-19 ಲಸಿಕೆಯನ್ನು ದೇಶದ ಪ್ರಜೆಗಳಿಗೆ ಉಚಿತವಾಗಿ ನೀಡುವುದಾಗಿ ಅಮೆರಿಕಾದ ಟ್ರಂಪ್ ಸರ್ಕಾರ ಘೋಷಿಸಿದೆ.
ಮುಂದಿನ ಜನವರಿ ವೇಳೆಗೆ ಅಮೆರಿಕಾದ ಎಲ್ಲರಿಗೂ ಉಚಿತ ಲಸಿಕೆ ಸಿಗಲಿದೆ ಎಂದು ಅಮೆರಿಕಾ ಸರ್ಕಾರ ಹೇಳಿದೆ. ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಟ್ರಂಪ್ ಸರ್ಕಾರದ ಲಸಿಕೆ ವಿತರಣೆ ಕಾರ್ಯಕ್ರಮದ ರೂಪುರೇಷೆಯನ್ನು ಅಮೆರಿಕಾದ ಆರೋಗ್ಯ ಮತ್ತು ರಕ್ಷಣಾ ಇಲಾಖೆ ಜಂಟಿಯಾಗಿ ಬಿಡುಗಡೆಗೊಳಿಸಿದವು.
ಪ್ರತಿ ಮನೆ ಮನೆಗೂ ಲಸಿಕೆಯನ್ನು ಸುರಕ್ಷಿತವಾಗಿ ಪೂರೈಸುವ ಗುರಿಯನ್ನು ಸರ್ಕಾರ ಹೊಂದಿದೆ. ಕೋವಿಡ್-19 ಲಸಿಕೆ ಪೂರೈಸುವ ಔಷಧ ಕಂಪನಿಗಳ ವೆಚ್ಚ ಭರಿಸುವುದಾಗಿ ಮತ್ತು ಲಸಿಕೆ ತೆಗೆದುಕೊಳ್ಳುವ ಜನರಿಂದ ಯಾವುದೇ ಹಣ ಪಡೆಯುವುದಿಲ್ಲ ಎಂದು ಟ್ರಂಪ್ ಸರ್ಕಾರ ಸ್ಪಷ್ಟವಾಗಿ ಹೇಳಿದೆ.