ವಾಷಿಂಗ್ಟನ್: ದೇಶಭ್ರಷ್ಟ ಟಿಬೆಟ್ ಸರ್ಕಾರದ ಅಧ್ಯಕ್ಷ ಲಾಬ್‌ಸಾಂಗ್ ಸಾಂಗೇ ಅವರು ಅಮೆರಿಕದ ಶ್ವೇತ ಭವನಕ್ಕೆ ಭೇಟಿ ನೀಡಿದ್ದು, ಇದು ಕೇಂದ್ರ ಟಿಬೆಟಿಯನ್ ಆಡಳಿತ (ಸಿಟಿಎ) ಐತಿಹಾಸಿಕ ಹೆಜ್ಜೆಯಾಗಿದೆ.
ಕಳೆದ ಆರು ದಶಕಗಳಿಂದ ಸಿಟಿಎ ಮುಖ್ಯಸ್ಥರಿಗೆ ಶ್ವೇತಭವನಕ್ಕೆ ಪ್ರವೇಶವನ್ನು ನಿರಾಕರಿಸಲಾಗಿತ್ತು. 60 ವರ್ಷಗಳಲ್ಲಿ ಅಮೆರಿಕದ ವಿದೇಶಾಂಗ ಸಚಿವಾಲಯವು ಇದೇ ಮೊದಲ ಬಾರಿಗೆ ಅವರ ಅಧ್ಯಕ್ಷರನ್ನು ಆಹ್ವಾನಿಸಿತ್ತು. ಭಾರತದಲ್ಲಿ ನೆಲೆಯಾಗಿರುವ ಟಿಬೆಟ್ ದೇಶಭ್ರಷ್ಟ ಸರ್ಕಾರಕ್ಕೆ ಈ ಮೂಲಕ ಮನ್ನಣೆ ನೀಡಿದ್ದು, ಇದು ಚೀನಾಕ್ಕೆ ಅಮೆರಿಕ ನೀಡಿದ ಮತ್ತೊಂದು ಸಂದೇಶ ಎಂದು ಸಹ ಹೇಳಬಹುದು.
ಡಾ. ಸಾಂಗೇ ಅವರು ಶ್ವೇತಭವನದ ಅಧಿಕಾರಿಗಳನ್ನು ಭೇಟಿಯಾಗಿರುವುದಾಗಿ ಸಿಟಿಎ ಮಾಹಿತಿ ನೀಡಿದೆ. ಇತ್ತೀಚೆಗೆ ಡಾ. ಸಾಂಗೇ ಅವರು ಹಲವಾರು ವಾಸ್ತವ ಸಭೆಗಳನ್ನು ನಡೆಸಿದ್ದಾರೆ. ಈ ಮೂಲಕ ಅವರು ಟಿಬೆಟಿಯನ್ ನೀತಿ ಮತ್ತು ಬೆಂಬಲ ಕಾಯ್ದೆ (ಟಿಪಿಎಸ್ಎ) ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ.
ಇನ್ನು ಕೇಂದ್ರೀಯ ಟಿಬೆಟ್ ಸರ್ಕಾರ ಎಂದು ಕರೆಯಲಾಗುವ ಟಿಬೆಟ್ ದೇಶಭ್ರಷ್ಟ ಸರ್ಕಾರವನ್ನು 1959ರಲ್ಲಿ ದಲೈ ಲಾಮಾ ಅವರು ಸ್ಥಾಪಿಸಿದ್ದರು. 1950–51ರಲ್ಲಿ ಚೀನಾದ ಸೇನೆಯು ಟಿಬೆಟ್ ಅನ್ನು ಆಕ್ರಮಿಸಿಕೊಂಡ ಬಳಿಕ ದಲೈ ಲಾಮಾ ಅವರು ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದರು. ಭಾರತಕ್ಕೆ ಬಂದ ಕೆಲವೇ ವಾರಗಳಲ್ಲಿ ಸರ್ಕಾರವನ್ನು ಅವರು ಸ್ಥಾಪಿಸಿದ್ದರು.