ನ್ಯೂಯಾರ್ಕ್(ಅಮೆರಿಕ): ನೆಬ್ರಸ್ಕಾದಲ್ಲಿರುವ ಲಿಂಕನ್ ಮಕ್ಕಳ ಮೃಗಾಲಯದಲ್ಲಿ (Lincoln Children's Zoo) ಮೂರು ಹಿಮ ಚಿರತೆಗಳಿಗೆ (snow leopards) ಕೊರೊನಾ ಸೋಂಕು (COVID-19) ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿವೆ.
ಈ ಕುರಿತು ಫೇಸ್ಬುಕ್ನಲ್ಲಿ ಮಾಹಿತಿ ನೀಡಿರುವ ಮೃಗಾಲಯ, ರಾನ್ನೆ, ಎವರೆಸ್ಟ್ ಮತ್ತು ಮಕಾಲು ಎಂಬ ಮೂರು ಹಿಮ ಚಿರತೆಗಳು ಸಾವನ್ನಪ್ಪಿದ್ದು, ನಿಜಕ್ಕೂ ಇದು ಹೃದಯ ವಿದ್ರಾವಕ ಘಟನೆ ಎಂದು ಬೇಸರ ವ್ಯಕ್ತಪಡಿಸಿದೆ.
ಕಳೆದ ತಿಂಗಳಲ್ಲಿ ಹಿಮ ಚಿರತೆಗಳಿಗೆ ಮತ್ತು ಎರಡು ಸುಮಾತ್ರನ್ ಹುಲಿಗಳಿಗೆ (Sumatran tigers) ಕೋವಿಡ್ ಸೋಂಕು ತಗುಲಿದ ಹಿನ್ನೆಲೆ ಚಿಕಿತ್ಸೆ ನೀಡಲು ಪ್ರಾರಂಭಿಸಲಾಗಿತ್ತು. ಇದರಲ್ಲಿ ಆಕ್ಸಲ್ ಮತ್ತು ಕುಮಾರ್ ಎಂಬ ಹುಲಿಗಳು ಚೇತರಿಸಿಕೊಂಡಿವೆ. ಆದರೆ ಹಿಮ ಚಿರತೆಗಳು ಮೃತಪಟ್ಟಿವೆ ಎಂದು ಜೂ ಮಾಲೀಕರು ತಿಳಿಸಿದ್ದಾರೆ.
ಅಮೆರಿಕದಲ್ಲಿ ಕೊರೊನಾ ಹಾವಳಿ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಆದರೂ ಮೃಗಾಲಯ ಸಾರ್ವಜನಿಕರಿಗೆ ಮುಕ್ತವಾಗಿದೆ. ಮಾನವರು ಮತ್ತು ಪ್ರಾಣಿಗಳಿಗೆ COVID-19 ಸೋಂಕು ಹರಡುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೃಗಾಲಯದ ಮಾಲೀಕರು ಸ್ಪಷ್ಟಪಡಿಸಿದ್ದಾರೆ.