ವಾಷಿಂಗ್ಟನ್(ಅಮೆರಿಕ):ಇಲ್ಲಿನ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಡ್ರ್ಯಾಗನ್ ಸ್ಪೇಸ್ಕ್ರ್ಯಾಫ್ಟ್ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಈ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಾಲ್ವರು ಗಗನಯಾತ್ರಿಗಳನ್ನು ನಾಸಾ ಯಶಸ್ವಿಯಾಗಿ ಕಳುಹಿಸಿದೆ.
ನಾಸಾ ಗಗನಯಾತ್ರಿಗಳಾದ ಮೈಕೆಲ್ ಹಾಪ್ಕಿನ್ಸ್, ವಿಕ್ಟರ್ ಗ್ಲೋವರ್, ಸೋಚಿ ನೊಗುಚಿ ಮತ್ತು ಶಾನನ್ ವಾಕರ್ ಅವರನ್ನು ಹೊತ್ತೊಯ್ದ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಭಾನುವಾರ ರಾತ್ರಿ 9.30ಕ್ಕೆ ಲಾಂಚ್ ಮಾಡಲಾಗಿದ್ದು, ಸುರಕ್ಷಿತವಾಗಿ ಆರ್ಬಿಟ್ ತಲುಪಿದೆ ಎಂದು ಸ್ಪೇಸ್ ಎಕ್ಸ್ ಮಾಹಿತಿ ನೀಡಿದೆ.
ನಾಲ್ವರು ಗಗನಯಾತ್ರಿಗಳನ್ನು ಹೊತ್ತೊಯ್ದಿರುವ ಫಾಲ್ಕನ್-9 ಹೆಸರಿನ ಬಾಹ್ಯಾಕಾಶ ನೌಕೆಯು ಹೆಚ್ಚುವರಿ ಇಂಧನ ಟ್ಯಾಂಕ್ಗಳನ್ನು ಯಶಸ್ವಿಯಾಗಿ ಬೇರ್ಪಡಿಸಿದೆ ಎಂದು ಸ್ಪೇಸ್ ಎಕ್ಸ್ ಮಾಹಿತಿ ನೀಡಿದೆ.
ಈ ಸ್ಪೇಸ್ಕ್ರ್ಯಾಫ್ಟ್ ಅನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಜಂಟಿಯಾಗಿ ಅಭಿವೃದ್ಧಿ ಪಡಿಸಿದ್ದು, ಇದೇ ಮೊದಲ ಬಾರಿಗೆ ವಾಣಿಜ್ಯ ಉದ್ದೇಶಕ್ಕಾಗಿ ಕಾರ್ಯಾಚರಣೆ ಮಾಡಲಿದೆ.
ನವೆಂಬರ್ 14ರಂದೇ ನೌಕೆಯ ಉಡಾವಣೆಗಾಗಿ ಸಮಯ ನಿಗದಿ ಮಾಡಲಾಗಿತ್ತು. ಆದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಲ್ಯಾಂಡಿಂಗ್ ಝೋನ್ನಲ್ಲಿ ಹವಾಮಾನದ ವೈಪರಿತ್ಯದ ಕಾರಣದಿಂದಾಗಿ ಉಡಾವಣೆಯನ್ನು ಮುಂದೂಡಲಾಗಿತ್ತು. ಇದಲ್ಲದೆ ಸ್ಪೇಸ್ ಎಕ್ಸ್ ಮುಖ್ಯ ಕಾರ್ಯನಿರ್ವಾಹಕ ಎಲೋನ್ ಮಸ್ಕ್ ಅವರಿಗೆ ಕೋವಿಡ್ ಲಕ್ಷಣ ಕಂಡುಬಂದಿದ್ದ ಹಿನ್ನೆಲೆ ಕಾರ್ಯಚರಣೆಯಲ್ಲಿ ಅವರು ಭಾಗಿಯಾಗಿರಲಿಲ್ಲ. ನೌಕೆಯ ಉಡಾವಣೆಯ ಸಮಯದಲ್ಲಿ ಅವರ ಬದಲಿಗೆ ಸ್ಪೇಸ್ ಎಕ್ಸ್ ಅಧ್ಯಕ್ಷ ಗ್ವಿನ್ವೆ ಶಾಟ್ವೆಲ್ ಹಾಜರಿದ್ದರು.
ಇದಲ್ಲದೆ ಸ್ಪೇಸ್ಗೆ ತೆರಳಿರುವ ನಾಲ್ವರು ಗಗನಯಾತ್ರಿಗಳ ಪೈಕಿ ಜಪಾನ್ನ ಸೋಚಿ ನೊಗುಚಿಗೆ ಇದೇ ಮೊದಲ ಬಾರಿಗೆ ನಾಸಾದೊಂದಿಗೆ ಕೈಜೋಡಿಸಿದ್ದಾರೆ. ಇವರ ಜೊತೆ ಗ್ಲೋವರ್ ಎಂಬಾತ ಕಪ್ಪು ಜನಾಂಗಕ್ಕೆ ಸೇರಿದವನಾಗಿದ್ದು, ಅತ್ಯಂತ ದೀರ್ಘಾವಧಿಯಲ್ಲಿ ಐಎಸ್ಎಸ್ನಲ್ಲಿ ಹಾರಾಟ ನಡೆಸಲಿರುವ ವ್ಯಕ್ತಿ ಇವರಾಗಲಿದ್ದಾರೆ.