ಕಾಬೂಲ್(ಅಫ್ಘಾನಿಸ್ತಾನ): 20 ವರ್ಷಗಳ ನಂತರ ಅಮೆರಿಕ ಸೈನಿಕರ ಅಸ್ಥಿತ್ವ ಕೊನೆಗೊಳ್ಳುತ್ತಿದ್ದಂತೆ ತಾಲಿಬಾನ್ ಅಫ್ಘಾನಿಸ್ತಾನಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ ಎಂದು ಘೋಷಿಸಿಕೊಂಡಿದೆ. ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ನಮ್ಮ ರಾಷ್ಟ್ರಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ.
ಈ ಮೊದಲೇ ನೀಡಿದ್ದ ಗಡುವಿಗೆ ಮೊದಲೇ ಅಫ್ಘಾನಿಸ್ತಾನದಿಂದ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಅಮೆರಿಕ ದೃಢಪಡಿಸಿದೆ. ಸುಮಾರು 2 ವಾರಗಳ ಕಾಲ ನಡೆದ ಸ್ಥಳಾಂತರ ಕಾರ್ಯ ಪೂರ್ಣಗೊಂಡಿದ್ದು, ಕೊನೆಯದಾಗಿ ಹೊರಟ ಅಮೆರಿಕ ವಾಯುಪಡೆಯ ವಿಮಾನವನ್ನು ನೋಡಿ, ತಾಲಿಬಾನ್ ಉಗ್ರರು ಗುಂಡು ಹಾರಿಸಿ, ವಿಜಯೋತ್ಸವ ಆಚರಿಸಿದ್ದಾರೆ. ಇನ್ನೂ ಹಲವೆಡೆ ಪಟಾಕಿ ಹಚ್ಚಿ ಸಂಭ್ರಮಿಸಲಾಗಿದೆ.
ಸುಮಾರು ತಿಂಗಳ ಹಿಂದೆ ಅಫ್ಘಾನಿಸ್ತಾನದ ಬಹುಭಾಗವನ್ನು ಆಕ್ರಮಿಸಿಕೊಂಡಿರುವುದಾಗಿ ಹೇಳಿದ್ದ ತಾಲಿಬಾನ್ ಇಂದು ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈ ವೇಳೆ ಮಾತನಾಡಿದ ತಾಲಿಬಾನ್ ಹೋರಾಟಗಾರ ಹೇಮದ್ ಶೆರ್ಜಾದ್, ನನ್ನ ಸಂತಸವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ನಮ್ಮ 20 ವರ್ಷಗಳ ತ್ಯಾಗ ಕೆಲಸ ಮಾಡಿದೆ ಎಂದಿದ್ದಾನೆ.
ಅಮೆರಿಕದ ಕೊನೆಯ ವಿಮಾನ ಮಧ್ಯಾಹ್ನ 3.29 (ಅಮೆರಿಕದ ಸಮಯ)ಕ್ಕೆ ಹೊರಟಿದೆ, ಸ್ಥಳಾಂತರ ಕಾರ್ಯ ಪೂರ್ಣಗೊಂಡಿದೆ ಎಂದು ವಾಷಿಂಗ್ಟನ್ನಲ್ಲಿ ಅಮೆರಿಕದ ಸೆಂಟ್ರಲ್ ಕಮಾಂಡ್ನ ಮುಖ್ಯಸ್ಥ ಫ್ರಾಂಕ್ ಮೆಕೆಂಜಿ ಘೋಷಿಸಿದ ನಂತರ ತಾಲಿಬಾನ್ ಹೋರಾಟಗಾರರು ವಿಜಯೋತ್ಸವ ಆಚರಿಸಿದ್ದಾರೆ.
ಇದನ್ನೂ ಓದಿ:Afghanistan crisis: ತಾಲಿಬಾನ್ ಗುಡುಗಿಗೆ ಗಡುವಿಗೂ ಮುನ್ನವೇ ಜಾಗ ಖಾಲಿ ಮಾಡಿದ ಅಮೆರಿಕ; ವಿಮಾನ ಹತ್ತಿದ ಕೊನೆಯ ಸೈನಿಕ