ಅಲಾಸ್ಕಾ(ಅಮೆರಿಕ):ಅಲಾಸ್ಕಾ ದ್ವೀಪದ ಕೆಲವೆಡೆ ಮಂಗಳವಾರ ಭಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.8 ರಷ್ಟು ತೀವ್ರತೆ ದಾಖಲಾಗಿದೆ. ಭಾರಿ ಭೂಕಂಪನಕ್ಕೆ ಉತ್ತರ ಪೆಸಿಫಿಕ್‌ನಲ್ಲಿನಲ್ಲಿ ಅಲೆಗಳು ಎದ್ದಿವೆ. ಅಲಾಸ್ಕಾದ ವಿರಳ ಜನಸಂಖ್ಯೆಯ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು -ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲಾಸ್ಕಾ ಭೂಕಂಪನ ಕೇಂದ್ರದ ಭೂಕಂಪ ಶಾಸ್ತ್ರಜ್ಞೆ ನಟಾಲಿಯಾ ರಪ್ಪರ್ಟ್, ಇದು ಅತ್ಯಂತ ಅಸಾಮಾನ್ಯ ಹಾಗೂ ಅತ್ಯಂತ ಶಕ್ತಿಯುತವಾದ ಭೂಕಂಪ ಎಂದು ಹೇಳಿದ್ದಾರೆ. ಅಲಾಸ್ಕಾದ ಉನ್ಮಾಕ್ ದ್ವೀಪದಲ್ಲಿ 39 ನಿವಾಸಿಗಳ ಸಮುದಾಯವಾದ ನಿಕೋಲ್ಸ್ಕಿಯ ಆಗ್ನೇಯಕ್ಕೆ ಸುಮಾರು 40 ಮೈಲುಗಳು ದೂರದಲ್ಲಿ ಈ ಭೂಕಂಪನ ಕೇಂದ್ರಬಿಂದು ಇತ್ತು ಎನ್ನಲಾಗಿದೆ. ಸುಮಾರು ಒಂದು ಗಂಟೆಯ ನಂತರ, ಅದೇ ಪ್ರದೇಶದಲ್ಲಿ ಮತ್ತೆ 6.6 ತೀವ್ರತೆಯ ಭೂಕಂಪ ಸಂಭವಿಸಿರುವ ವರದಿಯಾಗಿದೆ.