ವಾಷಿಂಗ್ಟನ್(ಅಮೆರಿಕ): ಉಕ್ರೇನ್ ಮತ್ತು ರಷ್ಯಾ ಯುದ್ಧ ಜಾಗತಿಕ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇನ್ನಷ್ಟು ದುಷ್ಪರಿಣಾಮ ಬೀರುವ ಭೀತಿಯ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಅಮೆರಿಕದ ಷೇರು ಮಾರುಕಟ್ಟೆಯಲ್ಲಿನ ಷೇರುಗಳು ಕುಸಿತ ಕಂಡಿವೆ.
ಸೋಮವಾರ ಅಮೆರಿಕದ ಎಸ್ ಆ್ಯಂಡ್ ಪಿ-500 ಶೇಕಡಾ 3ರಷ್ಟು ಕುಸಿತ ಕಂಡಿದೆ. ಎಸ್ ಆ್ಯಂಡ್ ಪಿ- 500 ಎಂದರೆ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಟಾಪ್ 500 ಕಂಪನಿಗಳ ಷೇರುಗಳ ಸೂಚ್ಯಂಕವಾಗಿದ್ದು, ಇದರಲ್ಲಿ ಕಂಡು ಬಂದ ಕುಸಿತ ಕಳೆದ 16 ತಿಂಗಳಲ್ಲೇ ಕಂಡ ಅತಿ ದೊಡ್ಡ ಕುಸಿತವಾಗಿದೆ.
ತೈಲದ ಜೊತೆಗೆ ಚಿನ್ನದ ಬೆಲೆಯೂ ಏರಿಕೆ ಕಂಡಿದೆ. ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 2,007.50 ಅಮೆರಿಕನ್ ಡಾಲರ್ ಅನ್ನು ದಿನದ ವಹಿವಾಟಿನಲ್ಲಿ ಮುಟ್ಟಿದ್ದು, ಅಂತಿಮವಾಗಿ 1,995.90 ಅಮೆರಿಕನ್ ಡಾಲರ್ಗೆ ತಲುಪಿದೆ. ಅಂದರೆ ಚಿನ್ನದ ಬೆಲೆಯಲ್ಲಿ 1.5ರಷ್ಟು ಏರಿಕೆ ಕಂಡು ಬಂದಿದೆ.
ಇಂಧನ ಬೆಲೆ ಹೆಚ್ಚಳಕ್ಕೆ ಕಾರಣ: ಕೊರೊನಾ ಸಾಂಕ್ರಾಮಿಕದ ನಂತರ ಜಗತ್ತಿನ ರಾಷ್ಟ್ರಗಳು ಚೇತರಿಕೆ ಕಾಣುತ್ತಿದ್ದವು. ಈ ವೇಳೆ ಕೈಗಾರಿಕೆಗಳೂ ಕೂಡಾ ತಮ್ಮ ಪುನಶ್ಚೇತನಕ್ಕೆ ಹೆಚ್ಚಿನ ಇಂಧನಕ್ಕೆ ಬೇಡಿಕೆ ಇಡುತ್ತಿದ್ದವು. ಆದ್ದರಿಂದ ಇಂಧನ ಬೆಲೆ ಆಗಲೇ ಹೆಚ್ಚಳವಿತ್ತು. ಇಂಧನ ಸರಬರಾಜು ಕೂಡಾ ಸಂಕಷ್ಟದಲ್ಲಿತ್ತು.
ಇದನ್ನೂ ಓದಿ:ರಷ್ಯಾ- ಉಕ್ರೇನ್ ಸಮರ: ಸಫಲತೆ ಕಾಣದ 3ನೇ ಸಂಧಾನ ಮಾತುಕತೆ!.. ಆದರೂ ಮೂಡಿದ ಬೆಳ್ಳಿರೇಖೆ
ಈಗ ರಷ್ಯಾ- ಉಕ್ರೇನ್ ಯುದ್ಧ ಪ್ರಾರಂಭವಾದ ಮೇಲೆ, ವಿಶ್ವದ ಅತಿದೊಡ್ಡ ಇಂಧನ ಉತ್ಪಾದಕರಲ್ಲಿ ಒಂದಾಗಿರುವ ರಷ್ಯಾದಿಂದ ಇಂಧನ ಕೊಳ್ಳುವುದನ್ನು ಕೆಲವು ರಾಷ್ಟ್ರಗಳು ನಿರ್ಬಂಧಿಸಿವೆ. ಹೀಗಾಗಿ ಇಂಧನ ಬೆಲೆ ಹೆಚ್ಚಾಗಿದೆ. ಸಾಮಾನ್ಯವಾಗಿ ಇಂಧನ ಬೆಲೆ ಹೆಚ್ಚಾದರೆ, ಬೇರೆಲ್ಲಾ ಸರಕುಗಳ ಬೆಲೆಯೂ ಹೆಚ್ಚಾಗುವುದು ಅನಿವಾರ್ಯವಾಗುತ್ತದೆ. ಪ್ರಸ್ತುತ ಇಂಧನ ಬೆಲೆಯೇ ಅಮೆರಿಕ ಷೇರು ಮಾರುಕಟ್ಟೆಯ ಷೇರುಗಳ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ರಷ್ಯಾ ಸಿಲುಕಿಸಲು ಮತ್ತಷ್ಟು ಕಾನೂನು:ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಭಾನುವಾರ ತನ್ನ ಸಹೋದ್ಯೋಗಿಗಳಿಗೆ ಬರೆದ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಉಕ್ರೇನ್ ಮೇಲಿನ ದಾಳಿ ಮಾಡಿದ ರಷ್ಯಾವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಬಲವಾದ ಕಾನೂನು ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.
ಈ ಕಾನೂನಿನ ಮೂಲಕ ರಷ್ಯಾದ ತೈಲ ಮತ್ತು ಇಂಧನ ಉತ್ಪನ್ನಗಳ ಆಮದುಗಳನ್ನು ನಿಷೇಧ ಮಾಡಬಹುದು ಎಂದಿದ್ದಾರೆ. ಈವರೆಗೂ ರಷ್ಯಾದ ಇಂಧನ ಆಮದು ವಿಚಾರದಲ್ಲಿ ಅಮೆರಿಕ ನಿರ್ಬಂಧ ಹೇರಿಲ್ಲ ಎಂಬುದು ತಿಳಿದುಕೊಂಡಿರಬೇಕಾದ ವಿಚಾರ.
ರಷ್ಯಾಗೆ ಪರ್ಯಾಯವಾಗಿ ವೆನೆಜುವೆಲಾ:ರಷ್ಯಾವನ್ನು ನಿಯಂತ್ರಿಸುವ ಅನೇಕ ಕ್ರಮಗಳನ್ನು ಈಗಾಗಲೇ ಅಮೆರಿಕ ಸರ್ಕಾರ ತೆಗೆದುಕೊಂಡಿದೆ. ಆದರೆ ಈಗ ರಷ್ಯಾದ ಇಂಧನ ಆಮದು ಮೇಲೆಯೂ ನಿರ್ಬಂಧ ಹೇರಲಾಗುತ್ತದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ತೈಲ ಉತ್ಪಾದನಾ ರಾಷ್ಟ್ರವಾದ ವೆನೆಜುವೆಲಾದ ಮೇಲೆ ಹೇರಿರುವ ನಿರ್ಬಂಧಗಳನ್ನು ತೆರವುಗೊಳಿಸುವ ಬಗ್ಗೆ ಅಮೆರಿಕ ಚಿಂತನೆ ನಡೆಸಿದೆ ಎನ್ನಲಾಗಿದ್ದು, ರಷ್ಯಾಗೆ ಪರ್ಯಾಯವಾಗಿ ವೆನೆಜುವೆಲಾವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.