ವಾಷಿಂಗ್ಟನ್: 20 ವರ್ಷಗಳ ಯುದ್ಧದ ನಂತರ ವಿದೇಶಿ ಸೇನಾ ಪಡೆಗಳು ಅಫ್ಘಾನಿಸ್ತಾನದಿಂದ ಹೊರಬಂದಿವೆ. ಅಮೆರಿಕ ಮತ್ತು ತಾಲಿಬಾನ್ ಉಗ್ರರ ನಡುವಿನ ಒಪ್ಪಂದದ ನಂತರ ಮೊದಲ ಬಾರಿಗೆ ಯುಎಸ್ ಸೇನೆಯನ್ನು ವಾಪಸ್ ಕರೆಸಿಕೊಳ್ಳಲಾಗಿದೆ. 2001ರಲ್ಲಿ ಅಫ್ಘಾನ್‌ನಲ್ಲಿ ಅಧಿಕಾರದಿಂದ ಕೆಳಗಿಳಿದ ತಾಲಿಬಾನ್ ಇದೀಗ ಮತ್ತೆ ಅಲ್ಲಿ ಪಾರುಪತ್ಯ ಮೆರೆಯುತ್ತಿದೆ. ಈ ಸುದೀರ್ಘ 2 ದಶಗಳ ಅವಧಿಯಲ್ಲಿ ಆ ದೇಶದಲ್ಲಿ ನಡೆದಿರುವ ಸಂಘರ್ಷದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ.
ಎರಡು ದಶಗಳ ಹಿಂದಿನ ಘಟನೆಯತ್ತ ಒಮ್ಮೆ ಇಣುಕಿ ನೋಡಿದಾಗ, 2001ರಲ್ಲಿ (9/11) ಅಫ್ಘಾನಿಸ್ತಾನದಲ್ಲೇ ಕುಳಿತು ಅಲ್ ಖೈದಾ ಸಂಘಟನೆ ನ್ಯೂಯಾರ್ಕ್‌ನ ಬಹುಮಹಡಿ ಅವಳಿ ಕಟ್ಟಡದ (WTC) ಮೇಲೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ದಾಳಿ ನಡೆಸಿ ಸುಮಾರು 3 ಸಾವಿರ ಮಂದಿಯ ಸಾವಿಗೆ ಕಾರಣವಾಗಿತ್ತು. ಇಸ್ಲಾಮಿಕ್ ಉಗ್ರ ಸಂಘಟನೆಯ ನಾಯಕ ಒಸಮಾ ಬಿನ್ ಲಾಡೆನ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ.
1996ರಿಂದ ಅಫ್ಘಾನ್‌ನಲ್ಲಿ ಅಧಿಕಾರದಲ್ಲಿದ್ದ ತಾಲಿಬಾನ್ ಲಾಡೆನ್‌ಗೆ ಆಶ್ರಯ ನೀಡಿತ್ತು. ಭೀಕರ ಎರಡು ದಾಳಿಗಳಿಗೆ ಕಾರಣವಾಗಿದ್ದ ಬಿನ್ ಲಾಡೆನ್‌ನನ್ನು ತಮಗೆ ಒಪ್ಪಿಸುವಂತೆ ಅಮೆರಿಕ ಮಾಡಿದ್ದ ಮನವಿಗೆ ತಾಲಿಬಾನ್ ಸ್ಪಂದಿಸಿರಲಿಲ್ಲ. ಶೀಘ್ರವೇ ಕಾರ್ಯಪ್ರವೃತ್ತವಾದ ಯುಎಸ್ ಅಫ್ಘಾನ್‌ನಲ್ಲಿ ತಾಲಿಬಾನ್ ಅನ್ನು ಅಧಿಕಾರದಿಂದ ಕೆಳಗಿಳಿಸಿ ಪ್ರಜಾಪ್ರಭುತ್ವದ ಸರ್ಕಾರ ಅಧಿಕಾರಕ್ಕೆ ಬರಲು ನೆರವು ನೀಡಿತ್ತು. ಅಲ್ಲಿಂದ ಅಮೆರಿಕ ತನ್ನ ಸೇನೆಯನ್ನು ನಿಯೋಜಿಸಿದ್ದರೂ ಸಂಭವಿಸಿದ ಸಾವು ನೋವುಗಳು ಅಷ್ಟಿಷ್ಟಲ್ಲ.
ಇದನ್ನೂ ಓದಿ:ಅಫ್ಘನ್ ಜನರ ಬೆಂಬಲಕ್ಕೆ ಬದ್ಧ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ
3,500ಕ್ಕೂ ಹೆಚ್ಚು ಸೈನಿಕರು ಬಲಿ
2001 ರಿಂದ 3,500 ಕ್ಕೂ ಹೆಚ್ಚು ಅಫ್ಘಾನ್ ಹಾಗೂ ಯುಎಸ್ ಸೈನಿಕರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂರನೇ ಎರಡರಷ್ಟು ಅಮೆರಿಕನ್ನರಿದ್ದು, 20,000 ಕ್ಕೂ ಹೆಚ್ಚು ಅಮೆರಿಕ ಸೈನಿಕರು ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ, ಅಫ್ಘಾನಿಸ್ತಾನವು ವಿಶ್ವದ ಮೂರನೇ ಅತಿದೊಡ್ಡ ಸ್ಥಳಾಂತರಗೊಂಡ ಜನಸಂಖ್ಯೆಯನ್ನು ಹೊಂದಿದೆ.
2012 ರಿಂದ, ಸುಮಾರು ಐದು ಮಿಲಿಯನ್(50 ಲಕ್ಷ) ಜನರು ಇಲ್ಲಿಂದ ಪಲಾಯನ ಮಾಡಿದ್ದಾರೆ. ಇವರೆಲ್ಲಾ ಮತ್ತೆ ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗಲಿಲ್ಲ. ಅಫ್ಘಾನಿಸ್ತಾನದಲ್ಲಿ ಸ್ಥಳಾಂತರಗೊಂಡವರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.