ವಾಷಿಂಗ್ಟನ್ :ಕಂಪನಿಯಲ್ಲಿನ ವ್ಯವಹಾರವು ಲಾಭದಾಯಕವಾಗಿದ್ದರೆ ಅಥವಾ ಯಾವುದಾದರು ಪ್ರಮುಖ ಒಪ್ಪಂದಗಳು ಆದಾಗ ಆ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಬೋನಸ್‌ಗಳನ್ನು ನೀಡುತ್ತವೆ. ಉದ್ಯೋಗಿಗಳ ಮಾಸಿಕ ವೇತನದ ಆಧಾರದ ಮೇಲೆ ನಿರ್ದಿಷ್ಟ ಮೊತ್ತವನ್ನು ಘೋಷಿಸಲಾಗುತ್ತದೆ.
ಆದರೆ, ಅಮೆರಿಕದ ಮಹಿಳಾ ಉದ್ಯಮಿ ಸಾರಾ ಬ್ಲೇಕ್ಲಿ ಉದ್ಯೋಗಿಗಳಿಗೆ ಸಖತ್ ಸರ್ಪ್ರೈಸ್ ನೀಡಿದ್ದಾರೆ. ಪ್ರತಿ ಉದ್ಯೋಗಿಗೆ ವಿಶ್ವದಲ್ಲಿ ಎಲ್ಲಿ ಬೇಕಾದರೂ ಪ್ರಯಾಣಿಸಲು ಎರಡು ಪ್ರಥಮ ದರ್ಜೆಯ ವಿಮಾನ ಟಿಕೆಟ್‌ಗಳನ್ನು ನೀಡಿದ್ದು, ಜೊತೆಗೆ ಖರ್ಚಿಗೆ ಇರಲಿ ಅಂತ 7.5 ಲಕ್ಷ ರೂಪಾಯಿ ಬೋನಸ್ ಘೋಷಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಸಾರಾ ಬ್ಲೇಕ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಕ್ಷಣಗಳನ್ನು ಆಚರಿಸಲು ನಾನು ನಿಮಗೆ ಈ ಕೊಡುಗೆಯನ್ನು ನೀಡುತ್ತಿದ್ದೇನೆ. ಇದಕ್ಕಾಗಿ ನಾನು ಪ್ರತಿ ಉದ್ಯೋಗಿಗೆ ಎರಡು ಪ್ರಥಮ ದರ್ಜೆ ವಿಮಾನದ ಟಿಕೆಟ್‌ಗಳನ್ನು ನೀಡುತ್ತಿದ್ದೇನೆ.
ನೀವು ಪ್ರವಾಸಕ್ಕೆ ಹೋದರೆ ಒಳ್ಳೆಯ ಹೋಟೆಲ್‌ನಲ್ಲಿ ಉತ್ತಮವಾದ ಊಟ ಮಾಡಬೇಕು. ಈ ಎಲ್ಲಾ ರೀತಿಯ ಖರ್ಚುಗಳಿಗಾಗಿ 7.5 ಲಕ್ಷ ರೂಪಾಯಿ ಕೊಡುತ್ತಿದ್ದೇನೆ. ಪ್ರತಿಯೊಬ್ಬ ಉದ್ಯೋಗಿಗೆ ಅವರ ಜೀವನದಲ್ಲಿ ಈ ಕ್ಷಣ ಎಂದೂ ಮರೆಯಲಾಗದಂತೆ ಇರಲು ನಾನು ಬಯಸುತ್ತೇನೆ ಎಂದು ಸಾರಾ ಬ್ಲೇಕ್ಲಿ ಹೇಳಿದ್ದಾರೆ.
ಸದ್ಯ ಸಾರಾ ನೀಡಿದ ಆಫರ್‌ನಿಂದ ನೌಕರರು ಹರ್ಷಗೊಂಡಿದ್ದಾರೆ. ಈ ಟಿಕೆಟ್‌ಗಳು ಮತ್ತು ಹಣದಿಂದ ಜಗತ್ತನ್ನು ಸುತ್ತುತ್ತೇವೆ ಎನ್ನುತ್ತಿದ್ದಾರೆ. ಇಷ್ಟಕ್ಕೂ ಈ ಉಡುಗೊರೆಗಳು ಏಕೆ ಕೊಟ್ಟಿರುವುದು ಗೊತ್ತಾ? ಸಾರಾ ಬ್ಲೇಕ್ಲಿಗೆ ಸೇರಿದ ಸ್ಪ್ಯಾಂಕ್ಸ್ ಕಂಪನಿ ಬ್ಲಾಕ್ ಸ್ಟೋನ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದ ಯಶಸ್ವಿಯಾಗಿದೆ.
ಬ್ಲಾಕ್‌ಸ್ಟೋನ್ ಸ್ಪ್ಯಾಂಕ್ಸ್ ಕಂಪನಿಯಲ್ಲಿನ ಹೆಚ್ಚಿನ ಪಾಲನ್ನು ಖರೀದಿಸುತ್ತಿದೆ. ಒಪ್ಪಂದವು 1.2 ಬಿಲಿಯನ್ ಡಾಲರ್ (8.93 ಕೋಟಿ ರೂ.) ಮೌಲ್ಯದ್ದಾಗಿದೆ. ಅದಕ್ಕಾಗಿಯೇ ಸಾರಾ ಕಂಪನಿಯೊಂದಿಗಿನ ಒಪ್ಪಂದದ ಸಂತೋಷವನ್ನು ಉದ್ಯೋಗಿಗಳೊಂದಿಗೆ ಈ ರೀತಿಯಲ್ಲಿ ಹಂಚಿಕೊಂಡಿದ್ದಾರೆ.