ಮೆಕ್ಸಿಕೋ (ಯುಎಸ್): ರಿಚರ್ಡ್ ಬ್ರಾನ್ಸನ್ ಸಂಸ್ಥಾಪಿಸಿದ ವರ್ಜಿನ್ ಗ್ಯಾಲಕ್ಟಿಕ್ (Virgin Galactic) ಸ್ಪೇಸ್ಫ್ಲೈಟ್ ಕಂಪನಿಯಲ್ಲಿ ತಯಾರಾದ ವಿಎಸ್‌ಎಸ್ ಯುನಿಟಿ 22 ಗಗನ ನೌಕೆಯಲ್ಲಿ ಇಂದು ಭಾರತೀಯ ಮೂಲದ ಗಗನಯಾತ್ರಿ ಸಿರಿಶಾ ಬಾಂದ್ಲಾ ಸೇರಿ ಒಟ್ಟು ಆರು ಮಂದಿ ಬಾಹ್ಯಾಕಾಶಕ್ಕೆ ಹಾರಿದ್ದಾರೆ.
ಇದೊಂದು ಪ್ರಯಾಣಿಕರ ರಾಕೆಟ್ ಆಗಿದ್ದು, ಈ ಸಬೋರ್ಬಿಟಲ್ ಬಾಹ್ಯಾಕಾಶ ರಾಕೆಟ್ ಅನ್ನು ಬಾಹ್ಯಾಕಾಶ ಪ್ರವಾಸಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ. ಇಂದು ಈ ನೌಕೆಯಲ್ಲಿ ಉದ್ಯಮಿ ರಿಚರ್ಡ್ ಬ್ರಾನ್ಸನ್ ಜತೆ ಭಾರತ ಮೂಲದ ಗಗನಯಾತ್ರಿ ಸಿರಿಶಾ ಬಾಂದ್ಲಾ ಕೂಡ ಅಂತರಿಕ್ಷಕ್ಕೆ ಹಾರಿರುವುದು ಹೆಮ್ಮೆಯ ವಿಚಾರವಾಗಿದೆ.
ವಿಎಸ್‌ಎಸ್ ಯುನಿಟಿ 22 ಉಡಾವಣೆಗೊಳ್ಳುವ ಹೊತ್ತಲ್ಲಿ ರಾಕೆಟ್ ಎಂಜಿನ್ ಅನ್ನು ಇಬ್ಬರು ಡೇವ್ ಮ್ಯಾಕೆ ಮತ್ತು ಮೈಕೆಲ್ ಮಸೂಚಿ ಸ್ಟಾರ್ಟ್ ಮಾಡಿದರು. ನಾನು ಹಿಂತಿರುಗಿದ ನಂತರ ಅನೇಕ ರೋಮಾಂಚನಕಾರಿ ವಿಚಾರಗಳನ್ನು ತಿಳಿಸುತ್ತೇನೆ. ಆ ಬಗ್ಗೆ ಈಗಲೇ ಉತ್ಸುಕನಾಗಿದ್ದೇನೆ ಮತ್ತು ಗಗನಯಾತ್ರೆ ಮಾಡಲು ಉತ್ಸುಕರಾಗಿರುವ ಹೆಚ್ಚೆಚ್ಚು ಜನರಿಗೆ ಅವಕಾಶ ನೀಡುತ್ತೇನೆ ಎಂದು ರಿಚರ್ಡ್ ಬ್ರಾನ್ಸನ್ ತಮ್ಮ ಟ್ವಿಟರ್ ಖಾತೆಯಲ್ಲಿ ಉಡ್ಡಯನಕ್ಕೂ ಮುನ್ನ ಬರೆದುಕೊಂಡಿದ್ದಾರೆ.
ಆಂಧ್ರದಪ್ರದೇಶದ ಸಿರಿಶಾ ಬಾಂದ್ಲಾ
ಒಟ್ಟು ಆರು ಯಾತ್ರಿಗಳಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿ, ಈಗ ಅಮೆರಿಕದಲ್ಲಿ ನೆಲೆಸಿರುವ 34 ವರ್ಷದ ಏರೋನಾಟಿಕಲ್ ಎಂಜಿನಿಯರ್ ಸಿರಿಶಾ ಬಾಂದ್ಲಾ ಸಹ ಒಬ್ಬರಾಗಿದ್ದಾರೆ. 90 ನಿಮಿಷಗಳ ಈ ಯಾನ ಇಡೀ ವಿಶ್ವದ ಗಮನಸೆಳೆದಿದೆ. ಸಹಸ್ರ ಕೋಟಿಯ ಅಧಿಪತಿ ಉದ್ಯಮಿ, ವರ್ಜಿನ್ ಗ್ಯಾಲಾಕ್ಟಿಕ್ ಕಂಪನಿಯ ಒಡೆಯ ರಿಚರ್ಡ್ ಬ್ರಾನ್ಸನ್ ಜತೆ ಸಿರಿಶಾ ಸಹ ಅಂತರಿಕ್ಷಕ್ಕೆ ಹಾರುತ್ತಿರುವುದು ಭಾರತಕ್ಕೆ ಹೆಮ್ಮೆಯ ವಿಚಾರವೂ ಹೌದು.
ಇದನ್ನೂ ಓದಿ:Billionaire Blastoff: ಬಾಹ್ಯಾಕಾಶಕ್ಕೆ ಹಾರಲು ಬಿಲೇನಿಯರ್ಗಳ ಸಿದ್ಧತೆ!
ಆರು ಗನನಯಾತ್ರಿಗಳನ್ನು ಹೊಂದಿರುವ ಗಗನ ನೌಕೆಯು ಮೆಕ್ಸಿಕೊದಿಂದ ಉಡ್ಡಯನಗೊಂಡಿತು. ಇಂದು ಸಂಜೆ (ಭಾರತೀಯ ಕಾಲಮಾನ) ಅಮೆರಿಕದ ನ್ಯೂಮೆಕ್ಸಿಕೋದಿಂದ ವಿಎಸ್‌ಎಸ್ ಯುನಿಟಿ 22 ಎಂಬ ಬಾಹ್ಯಾಕಾಶ ನೌಕೆಯನ್ನು ವಿಎಂಎಸ್ ಈವ್ (ಈವ್ ಎಂಬುದು ಬ್ರಾನ್ಸನ್ ಅವರ ತಾಯಿ ಹೆಸರು) ಎಂಬ ಮಾತೃನೌಕೆ ಹೊತ್ತೊಯ್ಯಿತು. 50 ಸಾವಿರ ಅಡಿ ಎತ್ತರಕ್ಕೆ ಹೋದ ಬಳಿಕ ಈವ್ ನೌಕೆಯಿಂದ ಯುನಿಟಿ ಪ್ರತ್ಯೇಕಗೊಳ್ಳಲಿದೆ.
ಏರೋನಾಟಿಕಲ್ ಎಂಜಿನಿಯರ್ ಆಗಿರುವ ಪರ್ದ್ಯೂ ವಿಶ್ವವಿದ್ಯಾಲಯದ ಪದವೀಧರೆ ಸಿರಿಶಾ, 2015ರಲ್ಲಿ ವರ್ಜಿನ್ ಗ್ಯಾಲಕ್ಟಿಕ್ ಸಂಸ್ಥೆಯಲ್ಲಿ ಸೇರ್ಪಡೆಗೊಂಡರು. ಪ್ರಸ್ತುತ ಇದೇ ಸಂಸ್ಥೆಯಲ್ಲಿ ಸರ್ಕಾರಿ ವ್ಯವಸ್ಥೆಗಳ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಾರ್ಜ್‌ಟೌನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್ ಪದವಿಯನ್ನೂ ಸಹ ಸಿರೀಶಾ ಪಡೆದಿದ್ದಾರೆ.
ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ ಸಿರಿಶಾ ಬಳಿಕ ಅಮೆರಿಕದ ಹೂಸ್ಟನ್‌ನಲ್ಲಿ ಬೆಳೆದರು. ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ನಂತರ ಬಾಹ್ಯಾಕಾಶಕ್ಕೆ ಹಾರಿದ ಮೂರನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಸಿರಿಶಾ ಪಾತ್ರರಾಗಿದ್ದಾರೆ.