ವಾಷಿಂಗ್ಟನ್: ಕೋವಿಡ್ ಮತ್ತು ವ್ಯಾಕ್ಸಿನೇಷನ್ ಬಗ್ಗೆ ಸೋಷಿಯಲ್ ಮೀಡಿಯಾ ಜನರಿಗೆ ತಪ್ಪು ಮಾಹಿತಿ ನೀಡಿ, ಜನರನ್ನು ಕೊಲ್ಲುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಫೇಸ್ಬುಕ್ ತನ್ನ ಕಾರ್ಯದ ಜತೆಗೆ ಸಾಮಾಜಿಕ ಕಳಕಳಿಯತ್ತ ಗಮನಹರಿಸಬೇಕಿದೆ ಎಂದು ಶ್ವೇತಭವನ ಹೇಳಿಕೆ ನೀಡಿದೆ.
ಕೋವಿಡ್ ಕಣ್ಣಿಗೆ ಕಾಣದ ವೈರಸ್ ಆಗಿದೆ. ಆದರೆ, ಸಾಮಾಜಿಕ ಮಾಧ್ಯಮವು ತಪ್ಪು ಮಾಹಿತಿ ವ್ಯಾಪಕವಾಗಿ ಹರಡಿ ಜನರನ್ನು ಕೊಲ್ಲುತ್ತಿದೆ ಎಂದು ಬೈಡನ್ ಆರೋಪಿಸಿದ್ದಾರೆ. ಅಮೆರಿಕದ ಅರೋಗ್ಯಾಧಿಕಾರಿಗಳ ಪ್ರಕಾರ, ಕೋವಿಡ್ ವ್ಯಾಪಕವಾಗಿ ಹರಡುತ್ತಿರುವುದರ ಜತೆಗೆ ಸಾವು-ನೋವುಗಳು ಹೆಚ್ಚಾಗಿವೆ ಎಂದು ಜಾಲತಾಣದಲ್ಲಿ ಹರಡಿರುವ ಸುದ್ದಿಯಿಂದಾಗಿ ಜನರು ಭೀತಿಗೊಳಗಾಗಿದ್ದಾರೆ. ಲಸಿಕೆ ವಿರೋಧಿಗಳು ಹರಡುವ ಸುಳ್ಳು ಸುದ್ದಿಯಿಂದ ಅನೇಕ ಜನರು ವ್ಯಾಕ್ಸಿನೇಷನ್ನನ್ನು ಕೂಡ ತಿರಸ್ಕರಿಸುತ್ತಿದ್ದಾರೆ. ಇದು ಬೈಡನ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ರಿಪಬ್ಲಿಕನ್ನರ ಕುತಂತ್ರ ಎಂದು ಡೆಮಾಕ್ರಟಿಕ್ ಸದಸ್ಯರು ದೂರಿದ್ದಾರೆ.
ಫೇಸ್ಬುಕ್ ಹಾಗೂ ಇತರ ಯಾವುದೇ ವಿರೋಧಿಗಳು ಏನೇ ರಣತಂತ್ರ ರೂಪಿಸಿದ್ರೂ ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಗುಡುಗಿದ್ದಾರೆ.