ನ್ಯೂಯಾರ್ಕ್/ಯುಎಸ್:ಪುರುಷರಿಗೆ ಸಮಾನವಾಗಿ ಮಹಿಳೆಗೆ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶಗಳನ್ನು ವಿಸ್ತರಿಸಲು ಮತ್ತು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣದ ಗುರಿಗಳನ್ನು ಮುನ್ನಡೆಸುವ ಭಾರತದ ಬದ್ಧತೆಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಶುಕ್ರವಾರ ಪುನರುಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 65ನೇ ಅಧಿವೇಶನದಲ್ಲಿ ಮಹಿಳೆಯರ ಸ್ಥಿತಿಗತಿ ಕುರಿತ ಸಾಮಾನ್ಯ ಚರ್ಚೆಯಲ್ಲಿ ಕೇಂದ್ರ ಸಚಿವೆ ಇರಾನಿ ಮಾತನಾಡಿದರು. "ಕೋವಿಡ್ ನಂತರದ ದಿನಗಳಲ್ಲಿ ಜಗತ್ತಿನಾದ್ಯಂತ ಇರುವ ನಮ್ಮ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗಾಗಿ ಹೆಚ್ಚು ನ್ಯಾಯಯುತ ಮತ್ತು ಸಮಾನವಾದ ಸ್ಥಾನಗಳನ್ನು ನಿರ್ಮಿಸುವ ಬದ್ಧತೆಯಲ್ಲಿ ಭಾರತ ಸ್ಥಿರವಾಗಿದೆ." ಎಂದು ಹೇಳಿದರು.
ಭಾರತವನ್ನು ಮಹಿಳಾ ಅಭಿವೃದ್ಧಿ ಎಂಬ ಮಾದರಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಕೊಂಡೊಯ್ಯುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವನ್ನು ಸಚಿವೆ ಸ್ಮೃತಿ ಇರಾನಿ ಶ್ಲಾಘಿಸಿದರು, 'ಆತ್ಮನಿರ್ಭರ ಭಾರತ್' ಆಕಾಂಕ್ಷೆಯನ್ನು ಈಡೇರಿಸುವಲ್ಲಿ ಮಹಿಳಾ ಸಂಸ್ಥೆ ಮತ್ತು ನಾಯಕತ್ವವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಭಾರತದಲ್ಲಿ ಮಹಿಳೆಯರ ಆರ್ಥಿಕ ಸ್ಥಿತಿ ಬಲಪಡಿಸಲು, ಉದ್ಯೋಗ ಮತ್ತು ಸ್ವ-ಉದ್ಯೋಗಾವಕಾಶಗಳ ಸೃಷ್ಟಿ, ಆರೋಗ್ಯ, ರಕ್ಷಣೆ, ಸುರಕ್ಷತೆ, ಭದ್ರತೆ ಮತ್ತು ಶಿಕ್ಷಣವನ್ನು ವಿಸ್ತರಿಸುವತ್ತ ಗಮನಹರಿಸುವ ಪ್ರಮುಖ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಅವರು ಹೇಳಿದರು.