ವಾಷಿಂಗ್ಟನ್:ಗ್ರೀನ್ಕಾರ್ಡ್ನಡಿ ಅಮೆರಿಕಕ್ಕೆ ವಲಸೆ ಬರುವ ಆಕಾಂಕ್ಷಿಗಳ ಪಟ್ಟಿ ಉದ್ದವಾಗುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಪ್ರತಿಭೆ ಆಧರಿಸಿದ ವಲಸೆ ನೀತಿಯನ್ನು ರಚಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ಸುಕರಾಗಿದ್ದಾರೆ.
ಈಗಿನ ಕುಟುಂಬ ಆಧಾರಿತ ವಲಸೆ ನೀತಿಯ ಬದಲಿಗೆ ಉದ್ಯೋಗಿಯ ಪ್ರತಿಭೆ, ಕೌಶಲ್ಯವನ್ನು ಆಧರಿಸಿದ ನೀತಿಯಡಿ ಬರುವ ವೀಸಾ ಕೋರಿಕೆಯ ಪ್ರಮಾಣವನ್ನು ಶೇ 12ರಿಂದ ಶೇ 57ಕ್ಕೆ ಹೆಚ್ಚಿಸುವ ಸಂಬಂಧ ಹೊಸ ಪ್ರಸ್ತಾಪವನ್ನು ಟ್ರಂಪ್ ಸರ್ಕಾರ ಮಂಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಮೆರಿಕ ಪ್ರತಿ ವರ್ಷ 1.1 ಮಿಲಿಯನ್ ಗ್ರೀನ್ಕಾರ್ಡ್ಗಳನ್ನು ವಲಸಿಗರಿಗೆ ನೀಡುತ್ತಿದೆ. ಇದು ಮುಂದಿನ ಐದು ವರ್ಷದ ಬಳಿಕ ಅಮೆರಿಕ ನಾಗರಿಕತ್ವ ಹಾಗೂ ಜೀವನಪೂರ್ತಿ ಇಲ್ಲಿಯೇ ನೆಲೆಸಲು ಸಹಾಯವಾಗುತ್ತಿದೆ.
ಸದ್ಯ ಚಾಲ್ತಿಯಲ್ಲಿರುವ ವಲಸೆ ನೀತಿಯು ಕೌಟುಂಬಿಕ ಆಧಾರಿತವಾಗಿದ್ದು, ವಲಸಿಗರು ತಮ್ಮ ಸಂಗಾತಿ ಮತ್ತು ಮಕ್ಕಳನ್ನು ತಮ್ಮ ಜತೆ ಕರೆದುಕೊಂಡು ಬರಬಹುದು. ಹೊಸ ಪದ್ಧತಿಯಲ್ಲಿ ವೃತ್ತಿಪರ ಕೌಶಲ್ಯ, ಶೈಕ್ಷಣಿಕ ಅರ್ಹತೆ, ಭಾಷಾ ಪ್ರಾವಿಣ್ಯತೆ ಸೇರಿದಂತೆ ಇತರೆ ಅರ್ಹತೆಗಳು ಇದ್ದರೆ ವಾಸಿಸಲು ಸುಲಭವಾಗಲಿದೆ.
'ಹಳೆ ಮಾದರಿಯ ವೀಸಾ ನೀತಿಯನ್ನು ಬದಲಾಯಿಸಲು ಬಯಸಿದ್ದೇನೆ. ಶೀಘ್ರವೇ ನೂತನ ಪ್ರಸ್ತಾವನೆ ಅನಾವರಣಗೊಳಿಸಲಾಗುವುದು. ನಮ್ಮ ಈ ಪ್ರಸ್ತಾವನೆ ಇಲ್ಲಿ ವಾಸಿಸುವ ವಲಸಿಗರಿಗೆ ನಾವು ಸಲ್ಲಿಸುವ ಕರ್ತವ್ಯ. ನಾಳೆ ನಮ್ಮನ್ನು ಸೇರಲಿರುವ ವಲಸಿಗರಿಗೂ ಅಮೆರಿಕ ಸ್ವಾಗತಾರ್ಹ ರಾಷ್ಟ್ರವಾಗಿ ಉಳಿಯಲಿದೆ ಎಂಬ ಭರವಸೆ ನಾವು ನೀಡುತ್ತೇವೆ' ಎಂದು ವೈಟ್ಹೌಸ್ನಲ್ಲಿ ವಲಸೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಟ್ರಂಪ್ ಮಾತನಾಡಿದ್ದಾರೆ.
'ನಾವು ನಮ್ಮ ದೇಶ ಕಟ್ಟಲು ಬಯಸಿ ವಲಸಿಗರಿಗೆ ಗೌರವಯುತವಾಗಿ ಬಾಗಿಲು ತೆರೆದಿದ್ದೇವೆ. ವೃತ್ತಿಪರ ಕೌಶಲ್ಯ, ಶೈಕ್ಷಣಿಕ ಅರ್ಹತೆ, ಭಾಷಾ ಪ್ರಾವಿಣ್ಯತೆಯ ವಲಸಿಗರು ಬರಬೇಕು' ಎಂದು ಹೇಳಿದ್ದಾರೆ.
ಈ ಪ್ರಸ್ತಾವನೆ ಜಾರಿಗೆ ಬಂದರೆ ಭಾರತೀಯ ವೃತ್ತಿಪರರಿಗೆ ಗ್ರೀನ್ಕಾರ್ಡ್ಗಾಗಿ ಸುದೀರ್ಘ ಕಾಯುವಿಕೆಯ ಸಮಸ್ಯೆ ತಪ್ಪಲಿದೆ. ಅಮೆರಿಕಕ್ಕೆ ಕಾಯಂ ಆಗಿ ವಲಸೆ ಹೋಗಲು ಬಯಸುವವರಿಗೆ ನಿರ್ದಿಷ್ಟ ಶೈಕ್ಷಣಿಕ ಅರ್ಹತೆ, ಕೌಶಲ್ಯಗಳು ಅಗತ್ಯವಾಗುವ ಸಾಧ್ಯತೆ ಇದೆ.
ಅಮೆರಿಕದ ನೂತನ ವಲಸೆ ನೀತಿಯ ಮಾಸ್ಟರ್ ಮೈಂಡ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜರ್ರೆಡ್ ಕುಷ್ನರ್, ಟ್ರಂಪ್ ಅವರಿಗೆ ಹಿರಿಯ ಸಲಹೆಗಾರರೂ ಆಗಿರುವ ಕುಷ್ನರ್, ಈ ನೂತನ ಯೋಜನೆಯು ಅಮೆರಿಕದ ಗಡಿ ಭದ್ರತೆಯನ್ನು ಬಲಪಡಿಸುವ ಹಾಗೂ ಈಗಿನ ಗ್ರೀನ್‌ಕಾರ್ಡ್ ವ್ಯವಸ್ಥೆಗೆ ಪರ್ಯಾಯ ಕಾಯಕಲ್ಪ ಒದಗಿಸುವ ಗುರಿಯನ್ನು ಇರಿಸಿಕೊಂಡು ಜಾರಿಗೆ ತರಲು ಸಜ್ಜಾಗಿದ್ದಾರೆ. ಗ್ರೀನ್‌ಕಾರ್ಡ್ ಸುಗುವ ಹಾದಿ ಹಾಗೂ ಪ್ರತಿಭಾವಂತ ವಲಸಿಗರಿಗೆ ಅಮೆರಿಕದಲ್ಲಿ ಖಾಯಂ ಆಗಿ ನೆಲಸು ಸಹಾಯಕವಾಗಲಿದೆ.