ವಾಷಿಂಗ್ಟ್ನ್(ಅಮೆರಿಕ): ಪ್ರಪಂಚದ ದೊಡ್ಡಣ್ಣ ಎಂದು ಹೆಸರುವಾಸಿಯಾಗಿರುವ ಅಮೆರಿಕ ದೇಶದ ಬಗ್ಗೆ ಸಹಜವಾಗಿಯೇ ಎಲ್ಲರಿಗೂ ತಿಳಿದಿರುವ ವಿಷಯವಾಗಿತ್ತು. ಆದರೆ ಅಲ್ಲಿನ ರಾಜಕೀಯ ಸ್ಥಿತಿ ಗತಿಗಳೇನು ಎಂಬುದು ಇಲ್ಲಿಯವರೆಗೆ ಹಲವಾರು ಮಂದಿಗೆ ತಿಳಿದಿರುವುದು ಕಡಿಮೆ. 2016ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಗೊಂಡ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಅಮೆರಿಕದ ವಸ್ತು ಸ್ಥಿತಿ ರಾಜಕೀಯದ ಬಗ್ಗೆ ಹಲವರಿಗೆ ತಿಳಿಯಲಾರಂಭಿಸಿದ್ದು, ಮಹಾಭಿಯೋಗ, ದೋಷಾರೋಪಣೆ ಎಂಬ ಅಂಶಗಳು ಅಮೆರಿಕ ಸಂವಿಧಾನದಲ್ಲಿದೆ ಎಂದು ಮನದಟ್ಟಾಯಿತು. ಇವೆಲ್ಲವುದಕ್ಕೂ ಕಾರಣ ಡೊನಾಲ್ಡ್ ಟ್ರಂಪ್.
ರಿಪಬ್ಲಿಕನ್ ಪಕ್ಷದಿಂದ 2016ರಂದು ಅಮೆರಿಕ ಅಧ್ಯಕ್ಷ ಗಾಧಿ ಹಿಡಿದ ಡೊನಾಲ್ಡ್ ಟ್ರಂಪ್ ತಮ್ಮ ವಿಚಿತ್ರ ವರ್ತನೆ, ನೇರ ನುಡಿ, ವಾಕ್ಚಾತುರ್ಯದಿಂದ ವಿಶ್ವದ ಗಮನ ಸೆಳೆದಿದ್ದರು. ಇವರ ಅಧಿಕಾರವಧಿಯಲ್ಲಿ ಹೊಗಳಿಕೆಗಳಿಗಿಂತ ತೆಗಳಿಕೆಗಳೇ ಅತಿಯಾಗಿ ಉದ್ಬವಿಸಿದ್ದು, ವಿಪಕ್ಷವಾಗಿದ್ದ ಡೆಮಾಕ್ರಟಿಕ್ ಪಕ್ಷ ಆರೋಪದ ಸುರಿಮಳೆಯನ್ನೇ ಸುರಿಸಿತ್ತು. ಇದರಲ್ಲಿ ಮುಖ್ಯವಾಗಿ ಟ್ರಂಪ್, ಉಕ್ರೇನಿಯನ್ ಅಧ್ಯಕ್ಷರ ಬಳಿ ಜೋ ಬೈಡನ್ ಹಾಗೂ ಅವರ ಮಗ ಹಂಟರ್ ಬಗ್ಗ ತನಿಖೆ ನಡೆಸಲು ಸಹಾಯ ಕೋರಿದ್ದರು ಎಂದು ಆರೋಪಿಸಿ ಡಿಸೆಂಬರ್ 2019ರನ್ನು ದೋಷಾರೋಪಣೆಗೆ ಒಳಪಡಿಸಲಾಯಿತು.
ಸ್ಪೀಕರ್ ನ್ಯಾನ್ಸಿ ಪೆಲೋಸಿಗೆ ಎರಡನೇ ಬಾರಿ ಮುಖಭಂಗ:
ಈ ವೇಳೆ ಸ್ಪೀಕರ್ ನ್ಯಾನ್ಸಿ, ಟ್ರಂಪ್ ವಿರುದ್ಧ ದೋಷಾರೋಪಣೆ ಮಾಡುವುದಾಗಿ ಪ್ರಕಟಿಸಿದ್ದರು. ದೋಷಾರೋಪಣೆ ಮಾಡಲೆಂದು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಪ್ರಕಟಿಸಿದ್ದರು. ಇದಕ್ಕೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಒಪ್ಪಿಗೆ ಪಡೆದು, ಈ ನಿರ್ಣಯವನ್ನ ಸೆನೆಟ್ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಸೆನೆಟ್ನಲ್ಲಿ ಟ್ರಂಪ್ಗೆ ಬಹುಮತವಿದ್ದಿದ್ದರಿಂದ ದೋಷಾರೋಪಣೆ ಅಂಗೀಕಾರಗೊಂಡಿರಲಿಲ್ಲ.
ಇದಾದ ಬಳಿಕ, ಕೊರೊನಾ ಎಂಬ ಮಹಾಮಾರಿ ಜಗತ್ತನ್ನೇ ಆಕ್ರಮಿಸಿಕೊಂಡು ಮನುಕುಲಕೆ ಸಂಕಟವನ್ನುಂಟು ಮಾಡಿತ್ತು. ಕೊರೊನಾದಿಂದಾಗಿ ಅಮೆರಿಕ ದೇಶ ಪಡಬಾರದ ಕಷ್ಟ ಅನುಭವಿಸಿದ್ದು, ಇದರ ಹೊಣೆಯೂ ಸಹ ಟ್ರಂಪ್ ತಲೆ ಮೇಲೆಯೇ ಬಂದೊದಗಿತು. ಇದೇ ಸದಾವಕಾಶ ಎಂದುಕೊಂಡ ಡೆಮಾಕ್ರಟಿಕರು ಕೊರೊನಾ ನಿರ್ವಹಣೆಯಲ್ಲಿ ಟ್ರಂಪ್ ವಿಫಲರಾಗಿದ್ದಾರೆ, ಕೇವಲ ವಾಕ್ಚಾತುರ್ಯತೆ ಇದ್ದರೆ ಸಾಲದು, ಕೆಲಸ ಮಾಡುವ ಇಚ್ಚಾಶಕ್ತಿಯೂ ಸಹ ಅತ್ಯವಶ್ಯಕ ಎಂದು ಸಮರ ಸಾರಲು ಆರಂಭಿಸಿದ್ದರು. ಅಷ್ಟೊತ್ತಿಗಾಗಲೇ ನವೆಂಬರ್ ಸಮೀಪಿಸಿದ್ದು, ಅಮೆರಿಕ ಚುನಾವಣೆಗೆ ದಿನಗಣನೆ ಪ್ರಾರಂಭಗೊಂಡಿತ್ತು.
ಸುಮಾರು 4 ವರ್ಷಗಳ ಕಾಲ ಹುಲಿಯಂತೆ ಘರ್ಜಿಸಿದ್ದ ಟ್ರಂಪ್, ಚುನಾವಣೆ ಸಮೀಪಿಸುತ್ತಿದ್ದಂತೆ ಕೊಂಚ ಸಪ್ಪಗಾಗಿದ್ದರು. ಅಷ್ಟೊತ್ತಿಗಾಗಲೇ, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಎಂದು ಹೇಳಿಕೊಂಡಿದ್ದ ಜೋ ಬೈಡೆನ್ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡು ಟ್ರಂಪ್ ಅಧಿಕಾರವಧಿಯಲ್ಲಿನ ಹಿನ್ನಡೆಗಳನ್ನು ಜನರಿಗೆ ಎತ್ತಿ ತೋರಿಸುವ ಕೆಲಸದಲ್ಲಿ ನಿರತರಾಗಿದ್ದರು. ಕೊರೊನಾ ಕಾಲಘಟ್ಟದಲ್ಲಿ ಟ್ರಂಪ್ ಅಧಿಕಾರ ನಿರ್ವಹಿಸಲು ವಿಫಲರಾಗಿದ್ದಾರೆ, ಅದಲ್ಲದೇ ಹಲವಾರು ಹಗರಣದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಡೆಮಾಕ್ರಟಿಕರು ಅಮೆಮರಿಕನ್ನರ ಮನವೊಲಿಸುವಲ್ಲಿ ಯಶಸ್ವಿಯಾಗತೊಡಗಿದರು.
ಸುಪ್ರೀಂನಲ್ಲಿ ಟ್ರಂಪ್ಗೆ ಮುಖಭಂಗ
ಈ ಮಧ್ಯೆ ಹೇಗಾದರೂ ಮಾಡಿ ಎರಡನೇ ಬಾರಿಗೆ ಅಧಿಕಾರ ಹಿಡಿಯಬೇಕೆಂಬ ಹೆಬ್ಬಯಕೆಯಿಂದ ಶತಾಯುಘತಾಯವಾಗಿ ಟ್ರಂಪ್ ಪ್ರಯತ್ನಿಸಿದ್ದರೂ ಸಹ, ಅವರ ಯಾವುದೇ ಆಲೋಚನೆಗಳು ಹಾಗೂ ತಂತ್ರಗಳು ಕೈ ಹಿಡಿಯಲಿಲ್ಲ. ಕೊನೆಗೂ 2020ರ ಚುನಾವಣೆಯಲ್ಲಿ ಟ್ರಂಪ್ ಸೋಲನುಭುವಿಸುವಂತಾಯಿತು. ಇದಾದ ಬಳಿಕವೂ ಮರಳಿ ಯತ್ನವ ಮಾಡು ಎಂಬಂತೆ, ಈ ಚುನಾವಣೆಯಲ್ಲಿ ಏನೋ ಮೋಸವಾಗಿದೆ, ನಾನು ಸೋಲುವುದು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಘಂಟಾ ಘೋಷವಾಗಿ ಹೇಳಿಕೊಂಡ ಟ್ರಂಪ್, ನ್ಯಾಯಾಲಯದ ಮೊರೆ ಹೋಗಿದ್ದರು, ಆದರೆ ದುರಾದೃಷ್ಟವಶಾತ್ ಸತ್ಯ ಎಂದಿಗೂ ಸುಳ್ಳಾಗುವುದಿಲ್ಲ ಎಂಬಂತೆ ಅವರ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು.
ಅಧಿಕಾರ ಬಿಡುವ ವಾರ ಮೊದಲು ಎರಡನೇ ಬಾರಿ ಮಹಾಭಿಯೋಗ ಗೊತ್ತುವಳಿ ಮಂಡನೆ:
ಇಷ್ಟೆಲ್ಲಾ ಆದ ಬಳಿಕವೂ ಸಹ ಟ್ರಂಪ್ಗೆ ದೋಷಾರೋಪಣೆ ಎಂಬುದು ಶನಿ ಹೆಗಲೇರಿದಂತಾಗಿತ್ತು. ನೀ ಎನ್ನ ಬಿಟ್ಟರು, ನಾ ನಿನ್ನ ಬಿಡಲಾರೆ ಎಂಬಂತೆ ಅಧ್ಯಕ್ಷ ಕುರ್ಚಿ ಟ್ರಂಪ್ ಕೈ ತಪ್ಪಿ ಹೋಗಿದ್ದರೂ ಸಹ, ಅಧಿಕಾರದವಧಿಯಲ್ಲಿ ಮಾಡಲಾದ ಅಪರಾಧಗಳು ಟ್ರಂಪ್ರನ್ನು ದೋಷಾರೋಪಣೆಗೆ ಒಳಪಡಿಸುವಂತೆ ಮಾಡಿತ್ತು. ಎಲ್ಲವುದಕ್ಕಿಂತ ಮುಖ್ಯವಾಗಿ ಜನವರಿ 6ರಂದು ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಕಟ್ಟಡದ ಮೇಲೆ ನಡೆಸಿದ ದಾಳಿಯೇ ಟ್ರಂಪ್ರನ್ನು ದೋಷಾರೋಪಣೆಗೆ ಒಳಪಡಿಸಲು ಪ್ರಮುಖ ಕಾರಣ ಎನ್ನಲಾಗಿದೆ. ಈ ಎಲ್ಲದರ ನಡುವೆ, ಡೊನಾಲ್ಡ್ ಟ್ರಂಪ್ ಹಲವಾರು ಬಾರಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದರು. ಆದರೂ ಸಹ ಟ್ರಂಪ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಬೇಕು ಎಂಬ ಉದ್ದೇಶದಿಂದ ಡೆಮಾಕ್ರಟಿಕರು ಟ್ರಂಪ್ ಅಧಿಕಾರದಿಂದ ಕೆಳಗಿಳಿದರೂ ಸಹ ದೋಷಾರೋಪಣೆಗೆ ಒಳಪಡಿಸಿದ್ದರು.
ಅಧಿಕಾರದಲ್ಲಿಲ್ಲದಿದ್ದರೂ ಮಹಾಭಿಯೋಗ ಮಾಡಬಹುದಾ?
ಅಧಿಕಾರ ಹಿಡಿದ ಪಕ್ಷದಿಂದ ಮಹಾಭಿಯೋಗವನ್ನು ನಡೆಸಲು ಅವಕಾಶವಿದ್ದು, ಇದನ್ನು 'ತಡ ಮಹಾಭಿಯೋಗ'(Late impeachment) ಎಂದು ಕರೆಯಲಾಗುತ್ತದೆ. ಮಹಾಭಿಯೋಗ ಯಶಸ್ವಿಯಾದರೆ ಆ ವ್ಯಕ್ತಿ ಮುಂದಿನ ದಿನಗಳಲ್ಲಿ ಅಧಿಕಾರ ಹಿಡಿಯಲು ಅಥವಾ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ. ಹೀಗಾಗಿ ಭವಿಷ್ಯದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರ ಹಿಡಿಯಬಾರದು ಎಂಬ ಕಾರಣಕ್ಕೆ ಡೆಮಾಕ್ರಟಿಕರು ಮಹಾಭಿಯೋಗ ನಡೆಸಿದ್ದರು.
ಅಧಿಕಾರವಧಿ ಮುಗಿಯುವ ವಾರ ಮೊದಲು ಹೌಸ್ ಆಫ್ ರೆಪ್ರೆಸೆಂಟಿಟಿವ್ನಲ್ಲಿ ಗೊತ್ತುವಳಿ ಅಂಗೀಕಾರ!
ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಬೆಂಬಲಿಗರು ದಾಳಿ ಮಾಡಿದ್ದನ್ನು ಖಂಡಿಸಿ ಹಾಗೂ ಅಮೆರಿಕ ಪ್ರಜಾಪ್ರಭುತ್ವಕ್ಕೆ ಟ್ರಂಪ್ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದ ಡೆಮಾಕ್ರಟ್ಗಳು, ಡೊನಾಲ್ಡ್ ಟ್ರಂಪ್ ವಿರುದ್ಧ ಮಹಾಭೀಯೋಗ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದರು. ಅಮೆರಿಕ ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವ ಗೊತ್ತುವಳಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿಟಿವ್ ನಲ್ಲಿ ಅಂಗೀಕಾರಗೊಂಡಿತ್ತು. ಇದು ಸೆನೆಟ್ನಲ್ಲಿ ಅಂಗೀಕಾರವಾಗಬೇಕಿತ್ತು. ಅಷ್ಟರಲ್ಲಿ ಡೊನಾಲ್ಡ್ ಅಧ್ಯಕ್ಷೀಯ ಅವಧಿ ಮುಗಿದು, ಜ. 20 ರಂದು ಬೈಡನ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಆಗ ಇಂಪೀಚ್ಮೆಂಟ್ ಪ್ರಕ್ರಿಯೆಗೆ ತಡೆ ಉಂಟಾಗಿತ್ತು.
ದೋಷಾರೋಪಣೆ ಗೊತ್ತುವಳಿ ವಿರೋಧಿಸಿದ ಟ್ರಂಪ್: ವಕೀಲರಿಂದ ಸಮರ್ಥ ವಾದ ಮಂಡನೆ
ಆದರೆ ಪಟ್ಟು ಬಿಡದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಸೆನೆಟ್ನಲ್ಲೂ ವಾಗ್ದಂಡನೆ ಪ್ರಕ್ರಿಯೆ ಮುಂದುವರೆಸಿದ್ದರು. ಈ ವೇಳೆ ಸೆನೆಟ್ನಲ್ಲಿ ಟ್ರಂಪ್ ಪರವಾಗಿ ವಕೀಲ ಮೈಕೆಲ್ ವ್ಯಾನ್ ಡೆರ್ ವೀನ್ ವಾದ ಮಂಡಿಸಿದ್ದು, ಟ್ರಂಪ್ರನ್ನು ದೋಷಾರೋಪಣೆಗೆ ಒಳಪಡಿಸುವುದರಲ್ಲಿ ಯಾವುದೇ ಹುರುಳಿಲ್ಲ, ಇದು ಡೆಮಾಕ್ರಟಿಕ್ ಪಕ್ಷ ಅವರ ಮೇಲೆ ದ್ವೇಷ ತೀರಿಸಿಕೊಳ್ಳಲು ಮಾಡುತ್ತಿರುವ ಕಾರ್ಯವಾಗಿದೆ ಎಂದು ಕಿಡಿಕಾರಿದ್ದರು. ಅದಲ್ಲದೆ, ಕ್ಯಾಪಿಟಲ್ ಕಟ್ಟಡದ ಮೇಲಿನ ದಾಳಿಗೂ ಮುಂಚಿತವಾಗಿಯೇ ಡೆಮೊಕ್ರಾಟ್ ಪಕ್ಷದವರು ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ ದ್ವೇಷದ ಅಭಿಯಾನ ನಡೆಸುತ್ತಿದ್ದರು. ಸಂದರ್ಭಕ್ಕೆ ಸರಿಯಾದಂತೆ ಜನವರಿ 6ರಂದು ಅದೊಂದು ದಾಳಿ ನಡೆದಿದ್ದು, ಡೆಮೊಕ್ರಾಟ್ಗಳು ಅಲ್ಲಿ ನಡೆದ ಸನ್ನಿವೇಶದ ಚಿತ್ರಣವನ್ನೇ ಬದಲಿಸಿದ್ದಾರೆ ಎಂದು ಆರೋಪಿಸಿದ್ದರು.
ಟ್ರಂಪ್ ಅವರ ನೇರ, ದಿಟ್ಟ ಮಾತುಗಳು ಹಾಗೂ ಅತಿಯಾದ ವಾಕ್ಚಾತುರ್ಯ ಡೆಮಾಕ್ರಟಿಕರ ಹೊಟ್ಟೆ ಕಿಚ್ಚಿಗೆ ಕಾರಣವಾಗಿತ್ತು. ಮೊದಲಿನಿಂದಲೂ ಟ್ರಂಪ್ ವಿರುದ್ದ ಕಿಡಿಕಾರುತ್ತಿದ್ದ ಅವರು, ಹೇಗಾದರೂ ಮಾಡಿ ಅಧ್ಯಕ್ಷ ಗಾದಿಯನ್ನು ಟ್ರಂಪ್ರಿಂದ ಕಿತ್ತುಕೊಳ್ಳಬೇಕೆಂದು ಹೊಂಚು ಹಾಕಿದ್ದರು. ಅದಲ್ಲದೆ ದೋಷಾರೋಪಣೆ ಮೂಲಕ ಮುಂದಿನ ಚುನಾವಣೆಯಲ್ಲಿಯೂ ಸಹ ಟ್ರಂಪ್ ಸ್ಪರ್ಧಿಸಬಾರದು ಎಂಬ ಹುನ್ನಾರ ಅವರದ್ದಾಗಿದೆ ಎಂದೂ ಸಹ ವಕೀಲರು ಪ್ರತಿಪಾದಿಸಿದ್ದರು.
ಟ್ರಂಪ್ ವಕೀಲರ ವಾದ ಬಲವಾಗಿ ಅಲ್ಲಗಳೆದ ಟೆಮಾಕ್ರಟಿಕರು:
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಡೆಮಾಕ್ರಟಿಕರು, ಅಧ್ಯಕ್ಷರ ಅಧಿಕಾರ ವರ್ಗಾವಣೆ ವೇಳೆ ಕ್ಯಾಪಿಟಲ್ನಲ್ಲಿ ನಡೆದ ಹಿಂಸಾಚಾರದ ವಿಚಾರವಾಗಿ ಟ್ರಂಪ್ ಖುಲಾಸೆಗೊಂಡರೆ ಮತ್ತೆ ಟ್ರಂಪ್ ಹಿಂಸಾಚಾರ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಜಾಮಿ ರಸ್ಕಿನ್ ಪ್ರತಿಪಾದಿಸಿದ್ದರು.