ನ್ಯೂಯಾರ್ಕ್ : ಜನವರಿ 23 ಮತ್ತು 31ರಂದು ನಡೆದ ಪ್ರತಿಭಟನೆಗಳ ವೇಳೆ ಬಂಧನಕ್ಕೊಳಗಾದ ಪತ್ರಕರ್ತರನ್ನು ಬಿಡುಗಡೆ ಮಾಡುವಂತೆ ನ್ಯೂಯಾರ್ಕ್ ಮೂಲದ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ರಷ್ಯಾವನ್ನು ಒತ್ತಾಯಿಸಿದೆ.
"ರಷ್ಯಾ ಅಧಿಕಾರಿಗಳು ಪತ್ರಕರ್ತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಮತ್ತು ಜನವರಿ 23 ಮತ್ತು 31ರ ಪ್ರತಿಭಟನೆಗಳ ಬಗ್ಗೆ ವರದಿ ಮಾಡಿದ ಕಾರಣಕ್ಕೆ ಬಂಧನಕ್ಕೊಳಗಾದ ಎಲ್ಲಾ ಮಾಧ್ಯಮ ಸಿಬ್ಬಂದಿಯ ವಿರುದ್ಧದ ಆರೋಪಗಳನ್ನು ತಕ್ಷಣವೇ ಕೈಬಿಡಬೇಕು.
ನಾಗರಿಕ ಅಶಾಂತಿಯ ಬಗ್ಗೆ ವರದಿ ಮಾಡುವ ಪತ್ರಕರ್ತರ ಮೇಲೆ ಕ್ರಮ ಜರುಗಿಸಬಾರದು, ಅವರನ್ನು ಬಂಧಿಸಿ ಕಿರುಕುಳ ನೀಡಬಾರದು "ಎಂದು ಸಿಪಿಜೆಯ ಯುರೋಪ್ ಮತ್ತು ಮಧ್ಯ ಏಷ್ಯಾ ಕಾರ್ಯಕ್ರಮ ಸಂಯೋಜಕರಾದ ಗುಲ್ನೋಜಾ ಆಗ್ರಹಿಸಿದ್ದಾರೆ.
ಓದಿ: ರಷ್ಯಾಧ್ಯಕ್ಷರ ವಿರುದ್ಧ ಮುಂದುವರಿದ ಪ್ರತಿಭಟನೆ: 5,000ಕ್ಕೂ ಹೆಚ್ಚು ಜನರ ಬಂಧನ
ಜನವರಿ 31ರಂದು ನಡೆದ ಪ್ರತಿಭಟನೆ ವೇಳೆ ಬಂಧನಕ್ಕೊಳಗಾದ ಪತ್ರಕರ್ತರ ಮೇಲಿನ ಪ್ರಕರಣಗಳನ್ನು ಪರಿಶೀಲಿಸುವಂತೆ ರಷ್ಯಾ ಪತ್ರಕರ್ತರ ಒಕ್ಕೂಟದ ಮುಖ್ಯಸ್ಥ ವ್ಲಾಡಿಮಿರ್ ಸೊಲೊವೊವ್ ರಷ್ಯಾದ ಆಂತರಿಕ ಸಚಿವ ವ್ಲಾಡಿಮಿರ್ ಕೊಲೊಕೊಲ್ಟ್ಸೆವ್ಗೆ ಈ ಹಿಂದೆ ಮನವಿ ಮಾಡಿದ್ದರು. ಪತ್ರಕರ್ತರು ಅವರ ವೃತ್ತಿ ನಿರ್ವಹಿಸುವ ವೇಳೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ, ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದರು.
ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ಉಲ್ಲಂಘಿಸಿ, ನ್ಯಾಯಸಮ್ಮತವಲ್ಲದ ಕಾರ್ಯನಿರ್ವಹಿಸಿದ್ದಾರೆ ಎಂಬ ಆರೋಪದ ಮೇಲೆ ರಷ್ಯಾ ಪ್ರತಿಪಕ್ಷ ನಾಯಕ ಅಲೆಕ್ಸಿ ನವಲ್ನಿಯನ್ನು ಬಂಧಿಸಲಾಗಿದೆ.
ಇದನ್ನು ವಿರೋಧಿಸಿ ನವಲ್ನಿ ಬೆಂಬಲಿಗರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಪತ್ರಕರ್ತರು ಸೇರಿದಂತೆ ಸುಮಾರು 5 ಸಾವಿರ ಜನರನ್ನು ಬಂಧಿಸಲಾಗಿದೆ.