ವಾಷಿಂಗ್ಟನ್(ಅಮೆರಿಕ) :ಪ್ರಜಾಪ್ರಭುತ್ವ ಶೃಂಗಸಭೆ ನಡೆಸಲು ನಿರ್ಧಾರ ಕೈಗೊಂಡಿರುವ ಅಮೆರಿಕ ನಿರ್ಧಾರದ ವಿರುದ್ಧ ಚೀನಾ ಮತ್ತು ರಷ್ಯಾ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ. ಪ್ರಜಾಪ್ರಭುತ್ವ ಶೃಂಗಸಭೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಹೊಸ ಅಂತರವನ್ನು ಸೃಷ್ಟಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಡಿಸೆಂಬರ್ 9 ಮತ್ತು 10ರಂದು ನಡೆಯಲಿರುವ ಪ್ರಜಾಪ್ರಭುತ್ವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು 110 ದೇಶಗಳನ್ನು ಅಮೆರಿಕ ಆಹ್ವಾನಿಸಿದೆ. ಆ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಪ್ರಜಾಪ್ರಭುತ್ವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾ ಮತ್ತು ಚೀನಾವನ್ನು ಅಮೆರಿಕ ಆಹ್ವಾನಿಸಿಲ್ಲ.
ಅಮೆರಿಕ ಪ್ರಜಾಪ್ರಭುತ್ವ ಶೃಂಗಸಭೆಯನ್ನು ನಡೆಸಲಿದೆ. ಈ ಕಾರ್ಯಕ್ರಮಕ್ಕೆ ಯಾರ್ಯಾರು ಹಾಜರಾಗಬೇಕೆಂದು ತಾನೇ ನಿರ್ಧಾರ ಮಾಡಿದೆ. ಯಾವ ದೇಶ ಪ್ರಜಾಪ್ರಭುತ್ವ ದೇಶ? ಯಾವ ದೇಶ ಪ್ರಜಾಪ್ರಭುತ್ವ ದೇಶವಲ್ಲ? ಎಂದು ತಾನೇ ನಿರ್ಧಾರ ಮಾಡಿದೆ ಎಂದು ಅಮೆರಿಕಕ್ಕೆ ಚೀನಾ ಮತ್ತು ರಷ್ಯಾದ ರಾಯಭಾರಿಯಾದ ಕ್ವಿನ್ ಗಾಂಗ್ ಮತ್ತು ಅನಾಟೊಲಿ ಆಂಟೊನೊವ್ ಹೇಳಿದ್ದಾರೆಂದು ವಾಷಿಂಗ್ಟನ್ ಮೂಲದ ನ್ಯಾಷನಲ್ ಇಂಟರೆಸ್ಟ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನ ಮಾಹಿತಿ ನೀಡಿದೆ.