ವಾಷಿಂಗ್ಟನ್: ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುವ ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ ಫೇಸ್‌ಬುಕ್(ಮೆಟಾ) ವಿರುದ್ಧ ದ್ವೇಷದ ಭಾಷಣ ಹರಡುವ ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳದ ಆರೋಪ ಕೇಳಿಬಂದಿದೆ.
ಮ್ಯಾನ್ಮಾರ್‌ನ ರೋಹಿಂಗ್ಯಾ ನಿರಾಶ್ರಿತರ ಹಿಂಸಾಚಾರಕ್ಕೆ ಕಾರಣವಾದ ರೋಹಿಂಗ್ಯಾ ವಿರೋಧಿ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಂಡಿಲ್ಲವೆಂದು ಫೇಸ್‌ಬುಕ್ ವಿರುದ್ಧ 150 ಬಿಲಿಯನ್ ಡಾಲರ್ ಪರಿಹಾರದ ಮೊಕದ್ದಮೆ ದಾಖಲಿಸಲಾಗಿದೆ. ಎಡೆಲ್ಸನ್ ಪಿಸಿ ಹಾಗೂ ಫೀಲ್ಡ್ಸ್ ಪಿಎಲ್‌ಎಲ್‌ಸಿ ಎಂಬೆರಡು ಕಾನೂನು ಸಂಸ್ಥೆಗಳು ಕಳೆದ ಸೋಮವಾರ ಕ್ಯಾಲಿಫೋರ್ನಿಯಾದಲ್ಲಿ ದೂರು ದಾಖಲಿಸಿವೆ.
ಫೇಸ್‌ಬುಕ್‌ನಲ್ಲಿ ರೋಹಿಂಗ್ಯಾ ಮತ್ತು ಇತರ ಮುಸ್ಲಿಮರ ಮೇಲೆ ಆಕ್ರಮಣ ಮಾಡುವ ಪೋಸ್ಟ್‌ಗಳು, ಕಾಮೆಂಟ್‌ಗಳು ಹಾಗೂ ಚಿತ್ರಗಳ 1,000ಕ್ಕೂ ಹೆಚ್ಚು ಉದಾಹರಣೆಗಳಿವೆ ಎಂದು ಅಮೆರಿಕಾದಲ್ಲಿ ಸಲ್ಲಿಕೆಯಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.