ವಾಷಿಂಗ್ಟನ್(ಅಮೆರಿಕ): ದೇಶ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದೆ. ಈ ಬೆನ್ನಲ್ಲೇ ಸಿಹಿ ಸುದ್ದಿಯೊಂದು ಹೊರಬಿದ್ದಿದ್ದು, ಅಮೆರಿಕದ ಪ್ರಭಾವಿ ಸಂಸದರೊಬ್ಬರು ಅಲ್ಲಿನ ಪಾರ್ಲಿಮೆಂಟ್ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಅಮೆರಿಕ ಕಾಂಗ್ರೆಸ್ನ ಗೋಲ್ಡ್ ಮೆಡಲ್ (Congressional Gold Medal) ನೀಡಬೇಕೆಂಬ ಮಸೂದೆ ಮಂಡಿಸಿದ್ದಾರೆ.
ಶಾಂತಿ ಮತ್ತು ಅಹಿಂಸೆಗೆ ಮಹಾತ್ಮ ಗಾಂಧಿಯವರು ನೀಡಿರುವ ಕೊಡುಗೆಗಾಗಿ ಕಾಂಗ್ರೆಸ್ನ ಗೋಲ್ಡ್ ಮೆಡಲ್ ನೀಡಬೇಕೆಂಬ ಮಸೂದೆಯನ್ನು ಪ್ರಭಾವಿ ಸಂಸದರಾದ ಕ್ಯಾರೊಲಿನ್ ಬಿ. ಮಲೋನಿ ಮರು ಮಂಡನೆ ಮಾಡಿದ್ದಾರೆ.
ಕಾಂಗ್ರೆಸ್ ಚಿನ್ನದ ಪದಕವು ಅಮೆರಿಕದ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿದೆ. ಮಹಾತ್ಮ ಗಾಂಧಿಯವರ ಐತಿಹಾಸಿಕ ಸತ್ಯಾಗ್ರಹ, ಅಹಿಂಸಾತ್ಮಕ ನೀತಿ ಜಗತ್ತಿಗೆ ಸ್ಫೂರ್ತಿ ನೀಡಿದೆ. ನಮ್ಮನ್ನು ಇತರರ ಸೇವೆಗೆ ಮುಡಿಪಾಗಿಡಲು ಅವರ ಆದರ್ಶಗಳು ನಮಗೆ ಶಕ್ತಿ ತುಂಬುತ್ತವೆ ಎಂದು ಕ್ಯಾರೊಲಿನ್ ಬಿ. ಮಲೋನಿ ಅಭಿಪ್ರಾಯಪಟ್ಟಿದ್ದಾರೆ.