ವ್ಯಾಂಕೋವರ್(ಕೆನಡಾ):ಮೂಲನಿವಾಸಿ ಮಕ್ಕಳಿಗಾಗಿಯೇ ವಸತಿ ಶಾಲೆಯಿದ್ದ ಸ್ಥಳದಲ್ಲಿ ಸುಮಾರು 600 ಮೃತದೇಹಗಳಿರುವ ಸಮಾಧಿಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ ಎಂದು ಕೆನಡಾದ ಮೂಲ ನಿವಾಸಿಗಳ ನಾಯಕರು ಅಚ್ಚರಿಯ ಮಾಹಿತಿ ನೀಡಿದ್ದಾರೆ.
1899ರಿಂದ 1997ರವರೆಗೆ ಅಸ್ತಿತ್ವದಲ್ಲಿದ್ದ ಮಾರಿವಾಲ್ ಇಂಡಿಯನ್ ರೆಸಿಡೆನ್ಶಿಯಲ್ ಸ್ಕೂಲ್ ಆವರಣದಲ್ಲಿ ಈ ಸಮಾಧಿಗಳು ಪತ್ತೆಯಾಗಿವೆ. ಇನ್ನೊಂದು ಅಚ್ಚರಿಯ ವಿಚಾರವೆಂದರೆ, ಮತ್ತೊಂದು ಶಾಲೆಯ ಬಳಿ ಹಿಂದಿನ ತಿಂಗಳು 215 ಸಮಾಧಿಗಳು ಪತ್ತೆಯಾಗಿದ್ದವು.
ಮಾರಿವಾಲ್ ಇಂಡಿಯನ್ ರೆಸಿಡೆನ್ಶಿಯಲ್ ಸ್ಕೂಲ್ ಈಗ ಕೊವೆಸ್ಸಸ್ ಫಸ್ಟ್ ನೇಷನ್ ಪ್ರದೇಶವಿದ್ದ ಸ್ಥಳದಲ್ಲಿದ್ದು, ಸಾಸ್ಕಾಚೆವಾನ್ ರಾಜಧಾನಿಯಾದ ರೆಜಿನಾದಿಂದ ಸುಮಾರು 135 ಕಿಲೋಮೀಟರ್ ದೂರದಲ್ಲಿದೆ. ಸ್ಥಳದಲ್ಲಿ ಸುಮಾರು 600 ಮೃತದೇಹಗಳನ್ನು ಸಮಾಧಿ ಮಾಡಿರಬಹುದೆಂದು ಕೊವೆಸ್ಸಸ್ ಪ್ರದೇಶದ ಮುಖ್ಯಸ್ಥ ಕ್ಯಾಡ್ಮಸ್ ಡೆಲೋರ್ಮೆ ಮಾಹಿತಿ ನೀಡಿದ್ದು, ಮತ್ತಷ್ಟು ಮೃತದೇಹಗಳು ಸಿಗುವ ಸಾಧ್ಯತೆಯಿದೆ. ರೋಮನ್ ಕ್ಯಾಥೋಲಿಕ್ ಚರ್ಚ್ ನಡೆಸುತ್ತಿದ್ದ ಶಾಲೆಯ ಬಳಿಯೂ ಈ ಹಿಂದೆ ಮೃತದೇಹಗಳು ಪತ್ತೆಯಾಗಿದ್ದವು ಎಂದಿದ್ದಾರೆ.
ಸಾಂಸ್ಕೃತಿಕ ಹತ್ಯಾಕಾಂಡ
ಕೆನಡಾದಲ್ಲಿ ಕೆಲವು ವರದಿಗಳು ಹೇಳುವಂತೆ, ಮೂಲನಿವಾಸಿಗಳಿಂದ ಅವರ ಮಕ್ಕಳನ್ನು ಬಲವಂತವಾಗಿ ಪ್ರತ್ಯೇಕಿಸಿ, ವಸತಿ ಶಾಲೆಗಳಲ್ಲಿ ಸೇರಿಸಿಕೊಳ್ಳಲಾಗುತ್ತಿತ್ತು. 1831ರಿಂದ 1996ರವರೆಗೆ ಸುಮಾರು ಒಂದೂವರೆ ಲಕ್ಷ ಮಂದಿ ಮೂಲನಿವಾಸಿ ಮಕ್ಕಳನ್ನು ಶಾಲೆಗಳಿಗೆ ಸೇರಿಸಿಕೊಳ್ಳಲಾಯಿತು. ಇಂಥ ಮಕ್ಕಳ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ಈ ಕಾರಣಕ್ಕಾಗಿ ಸುಮಾರು 4 ಸಾವಿರ ಮಂದಿ ಮಕ್ಕಳು ಸಾವನ್ನಪ್ಪಿದ್ದರು ಎಂದು ಕೆನಡಾದ ಸತ್ಯ ಮತ್ತು ಸಾಮರಸ್ಯ ಆಯೋಗ ತನ್ನ ಸಾಂಸ್ಕೃತಿಕ ಹತ್ಯಾಕಾಂಡದ ವರದಿಯಲ್ಲಿ ಮಾಹಿತಿ ಬಹಿರಂಗಪಡಿಸಿದೆ.