ವಾಷಿಂಗ್ಟನ್, ಅಮೆರಿಕ : ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ನೇತೃತ್ವದಲ್ಲಿ ನಡೆದ ಕ್ವಾಡ್ ರಾಷ್ಟ್ರಗಳ ಸಭೆಯಲ್ಲಿ ಭಾಗವಹಿಸಿದ್ದು, ಈ ನಾಲ್ಕೂ ಸದಸ್ಯ ರಾಷ್ಟ್ರಗಳು ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಮತ್ತು ಇಡೀ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕಾರ್ಯನಿರ್ವಹಿಸುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕ್ವಾಡ್ ಒಕ್ಕೂಟ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳನ್ನು ಪಾಲುದಾರರನ್ನಾಗಿ ಹೊಂದಿದ್ದು, ಪ್ರಪಂಚದ ದೃಷ್ಟಿಕೋನಗಳನ್ನು ಪರಸ್ಪರ ಹಂಚಿಕೊಳ್ಳಲಾಗುತ್ತದೆ. ಮುಂದಿನ ಭವಿಷ್ಯದ ಬಗ್ಗೆಯೂ ಈ ರಾಷ್ಟ್ರಗಳು ಒಂದೇ ರೀತಿಯ ದೃಷ್ಟಿಕೋನ ಹೊಂದಿವೆ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಾವು ಕೆಲಸಗಳನ್ನು ಹೇಗೆ ಮಾಡಬೇಕೆಂದು ನಮಗೆ ತಿಳಿದಿದೆ ಮತ್ತು ಮುಂದೆ ಬರಲಿರುವ ಸವಾಲನ್ನು ಎದುರಿಸುತ್ತೇವೆ. ಜಗತ್ತಿನ ಒಳಿತಿಗಾಗಿ ಕ್ವಾಡ್ ಒಕ್ಕೂಟ ಕೆಲಸ ಮಾಡಲಿದೆ ಎಂದು ಮೋದಿ ಈ ವೇಳೆ ಭರವಸೆ ನೀಡಿದರು.
ಕೋವಿಡ್ ವಿಚಾರವಾಗಿ ಮಾತನಾಡಿದ ಅವರು ಕ್ವಾಡ್ ರಾಷ್ಟ್ರಗಳ ವ್ಯಾಕ್ಸಿನ್ ಅಭಿಯಾನ ಇಂಡೋ ಪೆಸಿಫಿಕ್ ವಲಯದ ದೇಶಗಳಿಗೆ ತುಂಬಾ ಸಹಕಾರಿಯಾಗಲಿದೆ. ಕೋವಿಡ್ ವಿರುದ್ಧ ಜಗತ್ತು ಹೋರಾಡುತ್ತಿದೆ. 2004ರ ಸುನಾಮಿಯ ನಂತರ ರಾಷ್ಟ್ರಗಳು ಒಂದಾಗಿವೆ. ಮಾನವೀಯತೆಯ ಇನ್ನೊಂದು ರೂಪವಾಗಿ ಕ್ವಾಡ್ ಇರಲಿದೆ ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ವಾಡ್ ಸದಸ್ಯ ರಾಷ್ಟ್ರಗಳು ಪ್ರಜಾಪ್ರಭುತ್ವ ಮೌಲ್ಯಗಳ ಹಂಚಿಕೆಯ ಆಧಾರದ ಸಕಾರಾತ್ಮಕವಾಗಿ ಮುಂದುವರೆಯಬೇಕೆಂದು ನಿರ್ಧರಿಸಿವೆ. ಜಾಗತಿಕ ಭದ್ರತೆ, ಹವಾಮಾನ ವೈಪರಿತ್ಯ, ಕೋವಿಡ್ ಸಾಂಕ್ರಾಮಿಕ, ತಂತ್ರಜ್ಞಾನ ಸಹಕಾರ ಮುಂತಾದ ವಿಚಾರಗಳ ಬಗ್ಗೆ ಭಾರತದ ಮಿತ್ರ ರಾಷ್ಟ್ರಗಳೊಡನೆ ಚರ್ಚಿಸಲು ನನಗೆ ಸಂತೋಷವಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
2007ರಲ್ಲಿಯೇ ಕ್ವಾಡ್ ರಚನೆಯಾಯಿತಾದರೂ, ಅಷ್ಟೇನೂ ಪ್ರಸ್ತುತವಾಗಿರಲಿಲ್ಲ. ಚೀನಾದ ಆಕ್ರಮಣಾಕಾರಿ ವಿದೇಶಾಂಗ ನೀತಿ ಗೊತ್ತಾಗುತ್ತಿದ್ದಂತೆ ಕ್ವಾಡ್ ಒಕ್ಕೂಟಕ್ಕೆ 2017ರಲ್ಲಿ ಹೊಸ ನಿಯಮಗಳನ್ನು ರೂಪಿಸಲಾಯಿತು. ಅದರಲ್ಲೂ ಇಂಡೋ-ಪೆಸಿಫಿಕ್ ಭಾಗದಲ್ಲಿ ಪರಸ್ಪರ ಕಾರ್ಯತಂತ್ರ ರೂಪಿಸುವ ಸಲುವಾಗಿ ಕ್ವಾಡ್ ಒಕ್ಕೂಟಕ್ಕೆ ಹೊಸ ವಿನ್ಯಾಸ ನೀಡಲಾಯಿತು.
ಇದನ್ನೂ ಓದಿ:ಅಮೆರಿಕ, ಭಾರತ ಸಂಬಂಧ ವೃದ್ಧಿಗೆ ಉಭಯ ದೇಶಗಳ ಪ್ರತಿಜ್ಞೆ