ನ್ಯೂಯಾರ್ಕ್: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಆರ್ಬಿಐ ಅಧ್ಯಕ್ಷರಾಗಿದ್ದ ರಘುರಾಮ್ ರಾಜನ್ ಅವರ ಕಾಲದಲ್ಲಿ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆ ಕೆಟ್ಟ ದಿನಗಳನ್ನ ಅನುಭವಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.
ಅಮೆರಿಕದಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡುವಾಗ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಾರ್ವಜನಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಅಸಹ್ಯ ದುರ್ವಾಸನೆಯನ್ನ ಬಿಟ್ಟು ಹೋಗಿದ್ದಾರೆ ಎಂದಿದ್ದಾರೆ.
ಇತ್ತೀಚೆಗೆ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಮೋದಿ ಸರ್ಕಾರ ಮೊದಲ ಅವಧಿಯ ಬಗ್ಗೆ ಮಾತನಾಡಿದ್ದ ರಘುರಾಮ್ ರಾಜನ್, ನರೇಂದ್ರ ಮೋದಿ ಸರ್ಕಾರವು ಆರ್ಥಿಕತೆಯ ಬಗ್ಗೆ ಉತ್ತಮವಾಗಿ ಕಾರ್ಯನಿರ್ವಹಿಸಿಲ್ಲ ಎಂದು ನೇರವಾಗಿ ಆರೋಪ ಮಾಡಿದ್ದರು.
ಈ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ರಾಜನ್ ಅವರ ಬಗ್ಗೆ ಪ್ರತಿಕ್ರಿಯಿಸಲು ನಾನು ಒಂದು ನಿಮಿಷ ಸಮಯ ತೆಗೆದುಕೊಳ್ಳುತ್ತೇನೆ. ಏಕೆಂದರೆ ಅವರೊಬ್ಬ ಮಹಾನ್ ಮೇಧಾವಿ, ಭಾರತದ ಆರ್ಥಿಕತೆ ಕುಸಿಯುತಿದ್ದಂತ ಸಮಯದಲ್ಲಿ ಭಾರತದ ಸೆಂಟ್ರಲ್ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುವ ನಿರ್ಧಾರ ಮಾಡಿದವರು. ಆದ್ರೆ, ರಿಸರ್ವ್ ಬ್ಯಾಂಕ್ನ ಗವರ್ನರ್ ಆಗಿ ರಾಜನ್ ಅವರು ಕಾರ್ಯ ನಿರ್ವಹಿಸುವ ಕಾಲದಿಂದ ನಾಯಕರ ಸ್ನೇಹಿತರು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ ದೂರವಾಣಿ ಕರೆಗಳ ಆಧಾರದ ಮೇಲೆ ಸಾಲಗಳನ್ನು ನೀಡಲಾಗುತ್ತಿತ್ತು. ಇಲ್ಲಿಯವರೆಗೂ ಆ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಅಲ್ಲದೇ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದರೆ ಭಾರತಕ್ಕೆ ಸ್ಥಿರವಾದ ದೃಷ್ಟಿ ಹೊಂದಿರುತ್ತಿದ್ದರು ಎಂದು ರಘುರಾಮ್ ರಾಜನ್ ಒಪ್ಪುತ್ತಿದ್ದರು ಎಂದು ನನಗನ್ನಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.